ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮದ ಶಂಕೆ: ಮರುಪರೀಕ್ಷೆಗೆ ಆಗ್ರಹ
ಬೆಂಗಳೂರು: ಇತ್ತೀಚೆಗೆ ನಡೆದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ.
ಆಗಸ್ಟ್ 27 ರಂದು ನಡೆದಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಅನೇಕ ಲೋಪಗಳು ಕಂಡುಬಂದಿದ್ದವು. ಕನ್ನಡದಲ್ಲಿದ್ದ ಪ್ರಶ್ನೆಗಳನ್ನು ತಪ್ಪುತಪ್ಪಾಗಿ ನಮೂದು ಮಾಡಲಾಗಿತ್ತು. ಕನ್ನಡವನ್ನು ಕೆಟ್ಟಕೆಟ್ಟದಾಗಿ ಬಳಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಪಿಎಸ್ಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಕೆಪಿಎಸ್ಸಿ ಪರೀಕ್ಷೆಯಲ್ಲಿ ಹಾಜರಾಗಿದ್ದ ಅಭ್ಯರ್ಥಿಗಳು ನಗರದ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕರವೇ ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಮರುಪರೀಕ್ಷೆ ನಡೆಸಬೇಕು ಎಂದು ಸರಕಾರವನ್ನು ಒತ್ತಾಯಿಸಲಾಗುತ್ತಿದೆ.


