ಬಾಂಗ್ಲಾದೇಶದ ಪತ್ರಕರ್ತನಿಂದ ರಾಹುಲ್, ಸೋನಿಯಾ ಅವಹೇಳನ: ಬೆಂಗಳೂರಿನಲ್ಲಿ ಪ್ರಕರಣ ದಾಖಲು
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಆರೋಪದಡಿ ಬಾಂಗ್ಲಾದೇಶದ ಪತ್ರಕರ್ತ ಸೇರಿ ಇಬ್ಬರ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.
ಬಾಂಗ್ಲಾದೇಶದ ಪತ್ರಕರ್ತ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಹಾಗೂ ಪೋಸ್ಟ್ ಹಂಚಿಕೊAಡಿದ್ದ ಅದಿತಿ ಘೋಷ್ ಎಂಬವರ ವಿರುದ್ಧ ಕೆಪಿಸಿಸಿ ಕಾನೂನು ಘಟಕದ ವತಿಯಿಂದ ದೂರು ನೀಡಲಾಗಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
‘ಆಗಸ್ಟ್ ೨೩ರಂದು ತಮ್ಮ ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ, ಸೋನಿಯಾ ಗಾಂಧಿಯವರ ಅಂತರ್‌ಧರ್ಮೀಯ ವಿವಾಹ, ಭಾರತೀಯ ಪೌರತ್ವ ಹಾಗೂ ಧಾರ್ಮಿಕ ಸ್ವಾತಂತ್ರ‍್ಯ ಉಲ್ಲೇಖಿಸುವ ಮೂಲಕ ಅವರನ್ನು ಐಎಸ್‌ಐ ಏಜೆಂಟ್ ಎಂಬ ರೀತಿ ಬಿಂಬಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ವಿದೇಶಿ ಸ್ನೇಹಿತರ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಆ ಪೋಸ್ಟ್ ಅನ್ನು ಅದಿತಿ ಘೋಷ್ ಎಂಬವರು ಹಂಚಿಕೊಂಡು ಹೆಚ್ಚು ಜನರಿಗೆ ತಲುಪುವ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ. ಆ ಮೂಲಕ ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಗೌರವಕ್ಕೆ ಚ್ಯುತಿ ಉಂಟು ಮಾಡುತ್ತಿದ್ದಾರೆ. ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ದೂರಿನ ಅನ್ವಯ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಹಾಗೂ ಅದಿತಿ ಘೋಷ್ ಎಂಬವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


