ಧಾರವಾಡದ ಬಿಜೆಪಿ ಕಾರ್ಯಕರ್ತ ಯೋಗೀಶ್ ಗೌಡ ಕೊಲೆ ಮರುತನಿಖೆಗೆ ಆದೇಶ

Share It

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಹಾಗೂ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶಗೌಡ ಗೌಡ ಕೊಲೆ ಪ್ರಕರಣದ ಮರು ವಿಚಾರಣೆ ನಡೆಸಲು ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಯೋಗೇಶಗೌಡ ಗೌಡ ಕೊಲೆ ಪ್ರಕರಣದ 6 ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ. ಈ ಆದೇಶದಿಂದಾಗಿ ಪ್ರಕರಣದ ಆರೋಪಿಗಳು ಮತ್ತೆ ವಿಚಾರಣೆ ನಡೆಸಬೇಕಾದ ಅಗತ್ಯ ಎದುರಾಗಿದೆ.

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2024ರ ಜೂ.15ರಂದು ಯೋಗೇಶ ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಮೊದಲಿಗೆ ತನಿಖೆ ನಡೆಸಿದ್ದ ಧಾರವಾಡ ಪೊಲೀಸರು 6 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಶಾಸಕ ವಿನಯ ಕುಲಕರ್ಣಿ ಹೆಸರು ಕೈಬಿಡಲಾಗಿತ್ತು. ನಂತರ ಸಿಬಿಐ ತನಿಖೆ ನಡೆಸಿ, ದೋಷಾರೋಪ ಪಟ್ಟಿಯಲ್ಲಿ ಹೊಸದಾಗಿ 7 ರಿಂದ 21 ಆರೋಪಿಗಳನ್ನು ಸೇರ್ಪಡೆ ಮಾಡಿತ್ತು.

ಹೊಸ ಆರೋಪಿಗಳು ಸೇರ್ಪಡೆಯಾದ ಹಿನ್ನೆಲೆಯಲ್ಲಿ ಪ್ರಕರಣದ ಮರು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯ 2024 ರ ಜೂ.24ರಂದು ಆದೇಶಿಸಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿ, ಹೊಸದಾಗಿ ವಿಚಾರಣೆ ನಡೆಸುವುದರಿಂದ ಕಾನೂನು ತೊಡಕು ಉಂಟಾಗಲಿದೆ. ವಿಚಾರಣೆ ಸಹ ವಿಳಂಬವಾಗುತ್ತದೆ. ಆದ್ದರಿಂದ, ಹೊಸ ಆರೋಪಿಗಳು ಸೇರ್ಪಡೆಯಾದಾಗ ಪ್ರಕರಣ ಯಾವ ಹಂತದಲ್ಲಿತ್ತೋ, ಅಲ್ಲಿಂದಲೇ ವಿಚಾರಣೆ ಮುಂದುವರಿಸಲು ವಿಶೇಷ ನ್ಯಾಯಾಲಯಕ್ಕೆ ಆದೇಶಿಸಬೇಕು ಎಂದು ಕೋರಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಆರೋಪಿಗಳು ಮರು ತನಿಖೆಗೆ ಒಳಗಾಗಲಿದ್ದಾರೆ.


Share It

You May Have Missed

You cannot copy content of this page