ಡಬ್ಲಿಂಗ್ ಆಮಿಷವೊಡ್ಡಿ ಸಾವಿರಾರು ಜನರಿಗೆ ವಂಚಿಸಿದ ಖಾಸಗಿ ಕಂಪನಿ
ಮಂಡ್ಯ: ಹಣವನ್ನು ಡಬಲ್ ಮಾಡುವ ಆಮಿಷವೊಡ್ಡಿ ಖಾಸಗಿ ಕಂಪನಿಗಳು ಸಾವಿರಾರು ಜನರಿಗೆ ನೂರಾರು ಕೋಟಿ ರೂಪಾಯಿ ವಂಚಿಸಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಹಲವು ಕಂಪನಿಗಳು 2011 ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ಏಜೆಂಟರುಗಳ ಮೂಲಕ ಗ್ರಾಮೀಣ ಭಾಗದ ಜನರನ್ನ ಸೆಳೆದು ಇಂತಿಷ್ಟು ಹಣ ಕಟ್ಟಿದ್ರೆ ಹಣ ಡಬಲ್ ಕೊಡುವ ಆಮಿಷವೊಡ್ಡಿದ್ದರು. ಅದರಂತೆ ಜಿಲ್ಲೆಯಲ್ಲಿ ಸಾವಿರಾರು ಜನರು ಹತ್ತು ಸಾವಿರದಿಂದ ಹಿಡಿದು ಲಕ್ಷಾಂತರ ರೂ ಹಣವನ್ನು ಪ್ರತಿ ತಿಂಗಳAತೆ ಐದಾರು ವರ್ಷ ಕಟ್ಟಿದ್ದರು. ಕೆಲವಷ್ಟು ಮಂದಿ ಠೇವಣಿಯನ್ನು ಕೂಡ ಇಟ್ಟಿದ್ದರು.
ಹಣ ಕಟ್ಟಿದ ಜನರು ದಿಕ್ಕು ತೋಚದೇ ಕಂಗಾಲಾಗಿದ್ದು, ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದರೆ ಹಣ ವಾಪಸ್ ಬರುತ್ತದೆ ಎಂದು ನಿತ್ಯ ಸಾವಿರಾರು ಸಂತ್ರಸ್ತೆಯರು ಅರ್ಜಿಗಳನ್ನ ಸಲ್ಲಿಸುತ್ತಿದ್ದಾರೆ. ಹಣ ಕಟ್ಟಿಸಿಕೊಂಡ ಹಲವು ಖಾಸಗಿ ಕಂಪನಿಗಳು ಹಣ ಕಟ್ಟಿಸಿಕೊಂಡಿದ್ದಕ್ಕೆ ಬಾಂಡ್‌ಗಳನ್ನ ನೀಡಿದ್ದಾರೆ. ಪ್ರಾರಂಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಕಚೇರಿಗಳನ್ನ ತೆರೆದಿದ್ದವು. ನಂತರದಲ್ಲಿ ಕಚೇರಿಗಳನ್ನ ಬಂದ್ ಮಾಡಿಕೊಂಡು ಹೋಗಿವೆ.
ಸಂತ್ರಸ್ತರ ಅಸಹಾಯಕತೆ ಬಳಸಿಕೊಂಡ ಕೆಲ ಸಂಘ – ಸಂಸ್ಥೆಗಳು ಹಣ ಕೊಡಿಸುವುದಾಗಿ ನಂಬಿಸಿ ಮೋಸ ಹೋದ ಜನರಿಂದಲೇ ಹಣ ವಸೂಲಿ ಮಾಡುತ್ತಿವೆ. ಇನ್ನು ಪ್ರಾರಂಭದಲ್ಲಿ ಅರ್ಜಿಗಳನ್ನ ಸ್ವೀಕಾರ ಮಾಡಿದ ಜಿಲ್ಲಾಡಳಿತ ಇದೀಗ ಅರ್ಜಿಗಳನ್ನ ಸ್ವೀಕಾರ ಮಾಡುವುದನ್ನ ಕೂಡ ನಿಲ್ಲಿಸಿದೆ. ಸರ್ಕಾರದಿಂದ ಸಕ್ಷಮ ಪ್ರಾಧಿಕಾರ ರಚನೆ ಆಗಿ, ಅರ್ಜಿಗಳನ್ನ ಸ್ವೀಕರಿಸಲು ಅಧಿಕೃತ ಆದೇಶ ಹೊರಡಿಸುವವರೆಗೂ ಅರ್ಜಿಗಳ ಸ್ವೀಕಾರ ಸ್ಥಗಿತ ಮಾಡಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ, ಬಡ್ಸ್ ಕಾಯಿದೆ ಮತ್ತು ಕೆಪಿಐಡಿ ಕಾಯಿದೆ ಅಡಿ ವಿವಿಧ ಖಾಸಗಿ ಕಂಪನಿಗಳು ಸಾರ್ವಜನಿಕರಿಂದ ಹಣ ಪಡೆದು ವಂಚಿಸಿ, ಸಾಕಷ್ಟು ಸಂಖ್ಯೆಯಲ್ಲಿ ವಂಚನೆಗೊಳಗಾದವರು ಜಿಲ್ಲಾಧಿಕಾರಿ ಕಚೇರಿಗೆ ಬಂದು ಅರ್ಜಿಗಳನ್ನು ಸಲ್ಲಿಸುತ್ತಿದ್ದರು. ಇದರ ನಡುವೆ ಕೆಲ ಸಂಘ – ಸಂಸ್ಥೆಗಳು ಹಣ ವಾಪಸ್ ಕೊಡಿಸುತ್ತೇವೆ ಎಂದು ನಂಬಿಸಿ ಹಣ ಪಡೆದು ವಂಚನೆಗೊಳಗಾದವರನ್ನು ಮತ್ತೆ ವಂಚಿಸುತ್ತಿದ್ದಾರೆ. ಇಂತಹವರ ಮೇಲೆ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರ ಪೊಲೀಸರಿಗೆ ಸೂಚನೆ ಕೊಟ್ಟಿತ್ತು ಎಂದು ಹೇಳಿದರು.


