ಸೋಮಶೇಖರ್ ಹಂಪಿ,
ಅಣ್ಣಿಗೇರಿ: 12 ನೇ ಶತಮಾನದ ಅಮೇತೇಶ್ವರ ದೇವಸ್ಥಾನ ಅಣ್ಣಿಗೇರಿಯ ಪುರಾಣಪ್ರಸಿದ್ಧ ಮತ್ತು ಐತಿಹಾಸಿಕ ಕುರುಹಾಗಿ ಉಳಿದಿದೆ.
ಚಾಲುಕ್ಯರ ಕೊನೆಯ ರಾಜಧಾನಿಯಾಗಿ ಗುರುತಿಸಿಕೊಂಡಿದ್ದ ಅಣ್ಣಿಗೇರಿಯಲ್ಲಿ ಚಾಲುಕ್ಯ ಅರಸರು ಅಮೃತೇಶ್ವರ ದೇವಸ್ಥಾನದ ನಿರ್ಮಾಣ ಮಾಡಿದರು ಎಂದು ಇತಿಹಾಸ ಹೇಳುತ್ತದೆ. ಆದರೆ, ಪುರಾಣದ ಪ್ರಕಾರ ದೇವಸ್ಥಾನ ನಿರ್ಮಾಣಕ್ಕೂ ಮೊದಲೇ ಇಲ್ಲಿ ಅಮೃತೇಶ್ವರ ದೇವರ ಕುರುಹುಗಳಿದ್ದವು ಎನ್ನಲಾಗುತ್ತದೆ.
ಚಾಲುಕ್ಯ ವಾಸ್ತುಶಿಲ್ಪ ಮಾದರಿಯ ದೇವಸ್ಥಾನ, 76 ಕಂಬಗಳನ್ನು ಒಳಗೊಂಡಿದ್ದು, ಮೂಲ ಉದ್ಭವ ಲಿಂಗ ಇಲ್ಲಿನ ವಿಶೇಷ ಎನಿಸಿಕೊಂಡಿದೆ. ಪೂರ್ವಾಭಿಮುಖವಾಗಿ ದೇವರ ಮೂರ್ತಿ, ಗರ್ಭಗುಡಿ ನಿರ್ಮಾಣವಾಗಿದ್ದರೂ, ಪ್ರವೇಶ ಧ್ವಾರ ಮಾತ್ರ ದಕ್ಷಿಣಾಭಿಮುಖವಾಗಿ ಇರುವುದು ಇಲ್ಲಿನ ವಿಶೇಷ.
ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಲ್ಕೈದು ಶಾಸನಗಳು ಇಲ್ಲಿ ದೊರೆತಿವೆ. ದೇವಸ್ಥಾನದ ಪ್ರಾಂಗಣದಲ್ಲಿ ಇರುವ ಸಿಹಿನೀರಿನ ಬಾವಿ, ಸದಾಕಾಲ ತುಂಬಿತುಳುಕುತ್ತಿರುತ್ತದೆ. ದೇವರಿಗೆ ಅಭಿಮುಖವಾಗಿ ಇರುವ ನಂದಿ ಭಕ್ತರ ಇಷ್ಟಾರ್ಥ ಈಡೇರಿಸುವ ಕಲ್ಪತರು ಎಂದು ನಂಬಲಾಗಿದೆ.
ತಗ್ಗಿ- ಬಗ್ಗಿ ನಡೆಯಲು ಬಾಗಿಲಲ್ಲೇ ಪಾಠ: ಇನ್ನು ದೇವಸ್ಥಾನದ ಗರ್ಭಗುಡಿ, ಪ್ರಾಂಗಣದ ಬಾಗಿಲು ಬಲು ಎತ್ತರದಲ್ಲಿ ನಿರ್ಮಾಣವಾಗಿದೆ. ಆದರೆ, ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ತಗ್ಗಿ ಬಗ್ಗಿ ನಡೆಯುವ ಎಚ್ಚರಿಕೆ ನೀಡುವ ಸಲುವಾಗಿ ಪ್ರವೇಶ ದ್ವಾರದಲ್ಲಿ ದೊಡ್ಡ ಗಾತ್ರದ ಕಂಬವೊಂದನ್ನು ಅಡ್ಡಲಾಗಿ ಇಡಲಾಗಿದೆ. ಇದನ್ನು ಬಗ್ಗಿ ದಾಟಿ ಮುಂದೆ ಸಾಗುವುದು ಭಕ್ತರಿಗೆ ಅನಿವಾರ್ಯ.
ಪುರಾಣ ಏನು ಹೇಳುತ್ತೆ? : ಅಣ್ಣಿಗೇರಿ ಒಂದು ರುದ್ರುಭೂಮಿ ಎಂದು ಹೇಳಲಾಗಿದ್ದು, ಇಲ್ಲಿ ಮೇಯಲು ಬರುತ್ತಿದ್ದ ದೇಸಾಯಿ ಅವರ ಹಸುಗಳು ಸಂಜೆಯಾಗುತ್ತಿದ್ದಂತೆ ಅದರೊಳಗಿದ್ದ ಲಿಂಗದ ಮೇಲೆ ಹಾಲೆರೆಯುತ್ತಿದ್ದವು. ಮನೆಗೆ ಹೋದ ನಂತರ ಹಸು ಹಾಲು ಕೊಡುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ದೇಸಾಯಿ, ಮರುದಿನ ಬಂದು ಪರೀಕ್ಷೆ ಮಾಡಿದಾಗ ಹಸು ಲಿಂಗದ ಮೇಲೆ ಹಾಲೆರೆಯುವುದು ಕಂಡುಬಂತು. ಆಗ ನೋಡಿ ಗ್ರಾಮಸ್ಥರೆಲ್ಲ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸುವ ಕಾರ್ಯ ಆರಂಭಿಸಿದರು. ಅಂದಿನಿಂದ ಇದು ಅಮೃತ ಲಿಂಗೇಶ್ವರ ಎಂದೇ ಪ್ರಸಿದ್ಧವಾಯಿತು.

