ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗೆ 100 ಹೊಸ ಬಸ್‌ಗಳು ಆಗಮಿಸಲಿದ್ದು, ಗುರುವಾರದಿಂದ ಒಟ್ಟು 100 ಹೊಸ ಬಿಎಸ್-6 ಬಿಎಂಟಿಸಿ ಬಸ್‌ಗಳ ಸೇವೆ ನಗರದ ಪ್ರಯಾಣಿಕರಿಗೆ ಲಭ್ಯವಾಗಲಿವೆ.
ರಾಜ್ಯ ಸರ್ಕಾರ ಒಟ್ಟು 336 ಕೋಟಿ ರು. ವೆಚ್ಚದಲ್ಲಿ ಒಟ್ಟು 840 ಹೊಸ ಬಸ್ ಖರೀದಿಸಲು ಒಪ್ಪಿಗೆ ನೀಡಿದ್ದು, ಮೊದಲ ಹಂತದಲ್ಲಿ 100 ಬಿಎಸ್ 6 ಬಸ್ಸುಗಳು ರಸ್ತೆಗಿಳಿಯಲಿವೆ. ವಿಧಾನಸೌಧದ ಮುಂಭಾಗ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಗುರುವಾರ ಬಸ್ ಗಳಿಗೆ ಚಾಲನೆ ನೀಡಲಿದ್ದಾರೆ.
ಹೊಸ ಬಸ್‌ಗಳನ್ನು ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ಪ್ರದೇಶಗಳಲ್ಲಿ ಓಡಿಸಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಯಶವಂತಪುರ, ರಾಜಾಜಿನಗರ, ಮೈಸೂರು ರಸ್ತೆ, ಕೆಆರ್ ಪುರ ನಿಲ್ದಾಣಗಳಿಂದ ನಗರದ ಹೊರ ಭಾಗಗಗಳಿಗೆ ಹಾಗೂ ನಗರದ ಪ್ರಮುಖ ಸ್ಥಳಗಳಿಗೆ ಹೊಸ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ
ಬಸ್‌ಗಳಿಗೆ ಭಾರೀ ಬೇಡಿಕೆ: ಶಕ್ತಿ ಯೋಜನೆಯಿಂದ ಬಸ್‌ಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿವೆ. ಈ ಹಿನ್ನೆಲೆ ಬಸ್‌ಗಳು ಸಾಕಷ್ಟು ಪ್ರಯಾಣಿಕರ ದಟ್ಟಣೆ ಹೊಂದಿರುತ್ತವೆ. ಪ್ರಮುಖ ಮಾರ್ಗಗಳಲ್ಲಿ ಸಂಜೆ ಹಾಗೂ ಬೆಳಗಿನ ಅವಧಿಯಲ್ಲಿ ಬಸ್‌ಗಳ ಕೊರತೆ ಎದುರಾಗಿದೆ. ಈ ಕಾರಣದಿಂದ ರಾಜ್ಯ ಸರ್ಕಾರ ಬಿಎಂಟಿಸಿಗೆ 840 ಹೊಸ ಬಸ್ ಖರೀದಿಗೆ ಒಪ್ಪಿಗೆ ಕೊಟ್ಟಿತ್ತು. ಸದ್ಯ ಮೊದಲ ಹಂತದಲ್ಲಿ 100 ಬಸ್‌ಗಳು ಆಗಮಿಸುತ್ತಿರುವುದು ಪ್ರಯಾಣಿಕರ ಪಾಲಿಗೆ ಸಂತಸದ ವಿಷಯವಾಗಿದೆ.
ಬಿಎಂಸಿಟಿ ವತಿಯಿಂದ ನೂತನ ಬಸ್ ಮಾರ್ಗ ಆರಂಭಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ಯಶವಂತಪುರ ಕನಸವಾಡಿ ನಡುವೆ ಬಸ್ ಸಂಚಾರ ಮಾಡಲಿವೆ. ಮಾರ್ಗ ಸಂಖ್ಯೆ 253ಸಿ ಆಗಿದೆ. ಯಶವಂತಪುರದಿಂದ ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರ, ಹೆಸರಘಟ್ಟ ಟಿ. ಬಿ. ಕ್ರಾಸ್, ಕುಕ್ಕನಹಳ್ಳಿ, ಮಧುರೆ ಕನಸವಾಡಿಗೆ 1 ಬಸ್ಸು 4 ಟ್ರಿಪ್ ಸಂಚಾರ ಮಾಡಲಿದೆ. ಬೆಳಿಗ್ಗೆ ಯಶವಂತಪುರದಿಂದ 8.30 ಕ್ಕೆ ಮಧ್ಯಾಹ್ನ 12.05 ಕ್ಕೆ ಬಸ್ ಹೊರಡಲಿದೆ. ಕನಸವಾಡಿಯಿಂದ ಬೆಳಿಗ್ಗೆ 10.30, ಮಧ್ಯಾಹ್ನ 2 ಗಂಟೆಗೆ ಬಸ್ ಹೊರಡಲಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.