ಧಾರವಾಡ:ದಲಿತ ಸಂಘಟನೆಗಳಿಂದ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ತಮಟೆ ಚಳವಳಿ
ಧಾರವಾಡ: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟಗಾರರು, ತಮಟೆ ಬಡಿಯುತ್ತಾ ಘೋಷಣೆಗಳನ್ನು ಕೂಗಿ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರು.
ಸಂಘರ್ಷ ಸಮಿತಿಯ ಮುಖಂಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರನ್ನು ಭೇಟಿ ಮಾಡುವ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಸುಪ್ರಿಂ ಕೋರ್ಟ್ ಒಳಮೀಸಲಾತಿ ಜಾರಿಗೆ ಸರಕಾರಗಳಿಗೆ ನಿರ್ದೇಶನ ನೀಡಿತ್ತು. ಈ ಹಿಂದಿನ ಬಿಜೆಪಿ ಸರಕಾರ ಒಳ ಮೀಸಲಾತಿ ಪ್ರಸ್ತಾವನೆ ತಂದಿತ್ತಾದರೂ ಜಾರಿಗೆ ಹಿಂದೇಟು ಹಾಕಿತ್ತು.
ಕಾಂಗ್ರೆಸ್ ಸರಕಾರ ಬಂದರೂ ಕೂಡ ಒಳಮೀಸಲಾತಿ ಜಾರಿಯಾಗಿಲ್ಲ. ಚಿತ್ರದುರ್ಗದ ಎಸ್.ಸಿ.ಎಸ್.ಟಿ ಸಮಾವೇಶದಲ್ಲಿ ಕಾಂಗ್ರೆಸ್ ಒಳಮೀಸಲಾತಿ ಜಾರಿಯ ಭರವಸೆ ನೀಡಿತ್ತಾದರೂ, ಈವರೆಗೆ ಜಾರಿ ಮಾಡಿಲ್ಲ.
ಹೀಗಾಗಿ, ರಾಜ್ಯಾದ್ಯಂತ ವಿವಿಧ ದಲಿತ ಸಂಘಟನೆಗಳು ಒಳಮೀಸಲಾತಿ ಜಾರಿಗಾಗಿ ಹೋರಾಟ ನಡೆಸುತ್ತಿವೆ. ಧಾರವಾಡದಲ್ಲಿ ವಿನೂತನ ವಾಗಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರಕಾರಕ್ಕೆ ಮನವಿ ಮಾಡಿದ್ದಾರೆ.