ಬೆಂಗಳೂರು: ಶಾಲು ಹಿಡಿದ ಯುವಕನೊಬ್ಬ ಪ್ರಜಾಪ್ರಭುತ್ವ ದಿನಾಚರಣೆ ವೇದಿಕೆಗೆ ನುಗ್ಗಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ.
ಕನ್ನಡದ ಶಾಲು ಹಾಕಿದ್ದ ಯುವಕನೊಬ್ಬ, ಶಾಲು ಹಾಕುವ ಸಲುವಾಗಿ ಆತ ವೇದಿಕೆಯ ಮುಂಭಾಗಕ್ಕೆ ನುಗ್ಗಿ ಬಂದಿದ್ದು, ತಕ್ಷಣವೇ ವೇದಿಕೆಗೆ ಜಿಗಿದು ಸಿದ್ದರಾಮಯ್ಯ ಕಡೆಗೆ ಧಾವಿಸಿದ್ದಾನೆ.
ತಕ್ಷಣವೇ ಎಚ್ಚೆತ್ತುಕೊಂಡ ಸಿಎಂ ಭದ್ರತಾ ಸಿಬ್ಬಂದಿ ಯುವಕನನ್ನು ತಡೆದಿದ್ದಾರೆ. ಆದರೂ ಆತ ತಾನು ತಂದಿದ್ದ ಶಾಲನ್ನು ವೇದಿಕೆಯ ಕಡೆಗೆ ಎಸೆದಿದ್ದಾನೆ. ಅದು ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಕುಳಿತಿದ್ದ ಸಚಿವ ಕೆ.ಜೆ. ಜಾರ್ಜ್ ಅವರ ಬಳಿ ಬಿದ್ದಿದೆ.
ಘಟನೆಗೆ ಭದ್ರತಾ ಲೋಪ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು, ಯುವಕ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದು, ಅವರಿಗೆ ಶಾಲು ಹಾಕಲು ವೇದಿಕೆಗೆ ನುಗ್ಗಿದ ಎನ್ನಲಾಗುತ್ತಿದೆ.
ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನ ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಶಾಲು ಹಾಕುವುದಷ್ಟೇ ಆತನ ಉದ್ದೇಶವಾಗಿತ್ತಾ ಅಥವಾ ಬೇರೇನಾದರೂ ಕಾರಣ ಇತ್ತಾ ಎಂಬುದು ಇದೀಗ ಗೊತ್ತಾಗಬೇಕಿದೆ.

