ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ
ಬೀದರ್: ಅನುಭವ ಮಂಟಪದಿಂದ ಚಾಮರಾಜನಗರ ವರೆಗೆ ಮಾನವ ಸರಪಳಿ ನಿರ್ಮಿಸಿ ಸ್ವಾತಂತ್ರ್ಯ, ಸಮಾನತೆ, ಭಾತೃತ್ವದ, ಒಗ್ಗಟ್ಟಿನ ಮಂತ್ರ ಜಪಿಸುವ ಮೂಲಕ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ ನೀಡಲಾಯಿತು.
ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಡೀ ಜಗತ್ತಿಗೆ ಭಾರತದ ಸಂವಿಧಾನ ಶ್ರೇಷ್ಠವಾಗಿದೆ. ಸಂವಿಧಾನದ ಆಶಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಕಾರ್ಯಕ್ರಮದ ಆಶಯವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಜಾತಿ ಜಾತಿಗಳ ನಡುವೆ, ಧರ್ಮಗಳ ನಡುವೆ ಬಿರುಕು, ದ್ವೇಷ ಬಿತ್ತುವ ಕೆಲಸ ಮಾಡಲಾಗುತ್ತಿದೆ. ಬಡವರ ಮೇಲೆ ಹೆಚ್ಚಿನ ಶೊಷಣೆಗಳಾಗುತ್ತಿದ್ದು, ಅದನ್ನು ತಪ್ಪಿಸಲು ಸಂವಿಧಾನದ ಆಶಯಗಳು ಪೂರ್ಣ ಪ್ರಮಾಣದಲ್ಲು ಅನುಷ್ಠಾನ ವಾಗಬೇಕು. ಬ್ರಿಟನ್ ಗಿಂತ ಬಸವ ಕಲ್ಯಾಣದಲ್ಲಿ ಜಗತ್ತಿನ ಮೊದಲ ಸಂಸತ್ತು ನಿರ್ಮಿಸಲಾಗಿತ್ತು ಎಂದರು.
ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ರಾಜ್ಯದಲ್ಲಿ 10,000 ಸಸಿಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು. ಬಸವ ಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಪಟ್ಟದೇವರು, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದೇವರು, ಶಾಸಕ ಶರಣು ಸಲಗರ್, ಪೌರಾಡಳಿತ ಸಚಿವ ರಹೀಂ ಖಾನ್, ಎಂಎಲ್ಸಿ ಎಂಜಿ ಮುಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಇದ್ದರು.

