ಕಲಬುರಗಿ: ರಷ್ಯಾಕ್ಕೆ ಉದ್ಯೋಗಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಕಲಬುರುಗಿಯ ಮೂವರು ಯುವಕರು ಸುರಕ್ಷಿತವಾಗಿ ಭಾನುವಾರ ತವರಿಗೆ ಮರಳಿದ್ದಾರೆ.
ರಷ್ಯಾಗೆ 2023ರ ಡಿಸೆಂಬರ್ನಲ್ಲಿ ಉದ್ಯೋಗಕ್ಕಾಗಿ ತರಳಿದ್ದರು. ಕಲಬುರಗಿಯ ನೂರಾನಿ ಮೊಹಲ್ಲಾ ನಿವಾಸಿ ಸೈಯದ್ ಇಲಿಯಾಸ್ ಹುಸೇನಿ, ಇಸ್ಲಾಮಬಾದ್ ಕಾಲೊನಿ ನಿವಾಸಿ ಸಮೀರ್ ಅಹ್ಮದ್, ಮಿಜಗುರಿ ಪ್ರದೇಶದ ಅಬ್ದುಲ್ ನಯೀಮ್ ವಾಪಸ್ ಆದವರು.
ಮುಂಬೈ ಮೂಲದ ಬಾಬಾ ಜಾಬ್ ಸೆಕ್ಯೂರಿಟಿ ಏಜೆನ್ಸಿ ಯುವಕರಿಂದ ಲಕ್ಷಾಂತರ ರೂಪಾಯಿ ಪಡೆದು, ರಷ್ಯಾದಲ್ಲಿ ಸೆಕ್ಯೂರಿಟಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ಯುವಕರು ರಷ್ಯಾಕ್ಕೆ ತೆರಳಿದ್ದರು.
ಆದರೆ, ಉಕ್ರೇನ್ ಮತ್ತು ರಷ್ಯಾ ಮಧ್ಯೆ ಯುದ್ಧ ಶುರುವಾದ ಬಳಿಕ ರಷ್ಯಾ ಸೇನೆ ಯುವಕರನ್ನು ಯುದ್ದದಲ್ಲಿ ಬಳಸಿಕೊಳ್ಳಲು ಸೂಚನೆ ನೀಡಿತ್ತು.
ಬಂಕರ್‌ಗಳನ್ನು ಅಗೆಯುವ ಕೆಲಸಕ್ಕೆ ಇವರನ್ನು ನಿಯೋಜಿಸಲಾಗಿತ್ತು.
ಇದರಿಂದ ಬೇಸತ್ತ ಯುವಕರು, ರಷ್ಯಾದಲ್ಲಿ ತಮಗೆ ನೀಡಿರುವ ಕೆಲಸದ ಕುರಿತು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿ ಯುವಕರನ್ನು ಮರಳಿ ತರುವಂತೆ ಕೇಂದ್ರ ಸರಕಾರಕ್ಕೆ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಪತ್ರ ಬರೆದು ಒತ್ತಾಯಿಸಿದ್ದರು.
ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿ, ವಾಪಸ್ ಆದ ಕೆಲವೇ ದಿನಗಳಲ್ಲಿ ಮೂವರು ಯುವಕರು ಮರಳಿ ತವರಿಗೆ ಮರಳಿದ್ದಾರೆ.