ಚಿಂತಾಮಣಿ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿಯ ಗಾಂಧಿ ನಗರದಲ್ಲಿ ನಡೆದಿದೆ.
ಬಿಂದುಶ್ರೀ ಎಂಬ ನವವಿವಾಹಿತೆಯೇ ಆತ್ಮಹತ್ಯೆಗೆ ಶರಣಾದವರು. ಬಿಂದುಶ್ರೀ ಅವರ ವಿವಾಹವು ರಾಘವೇಂದ್ರ ಎಂಬಾತನೊಂದಿಗೆ ಕಳೆದ ಆರು ತಿಂಗಳ ಹಿಂದೆಯಷ್ಟೇ ನಡೆದಿತ್ತು. ಆರು ತಿಂಗಳಲ್ಲಿಯೇ ಗಂಡನ ಮನೆಯವರಿಂದ ವರದಕ್ಷಿಗೆಗಾಗಿ ಕಿರುಕುಳ ಆರಂಭವಾಗಿತ್ತು ಎನ್ನಲಾಗಿದೆ.
ಬಿಂದುಶ್ರೀಗೆ ಗಂಡ ರಾಘವೇಂದ್ರ, ಮಾವ ನರಸಿಂಹಯ್ಯ ಹಾಗೂ ಅತ್ತೆ ಲತಾ ಎಂಬುವವರು ಕಿರುಕುಳ ಕೊಡುತ್ತಿದ್ದರು. ಹೀಗಾಗಿ, ಬಿಂದುಶ್ರೀ ತನ್ನ ತಂದೆಯ ಮನೆಗೆ ಆಗಮಿಸಿ, ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗಳ ಆತ್ಮಹತ್ಯೆ ಯಿಂದ ಮನನೊಂದು ಆಕೆಯ ತಂದೆ ಕೆ.ಬಿ.ದೇವರಾಜ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಗಳ ಆತ್ಮಹತ್ಯೆ ಮತ್ತು ಗಂಡನ ಆತ್ಮಹತ್ಯೆ ಯತ್ನದಿಂದ ಪತ್ನಿ ಆಘಾತಕ್ಕೆ ಒಳಗಾಗಿದ್ದು, ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.
ಸ್ಥಳಕ್ಕೆ ಆಗಮಿಸಿರುವ ಚಿಂತಾಮಣಿ ಪಟ್ಟಣದ ಪೊಲೀಸರು, ಗಂಡನ ವಿರುದ್ಧ ದೂರು ದಾಖಲಿಸಿಕೊಂಡು, ಎಫ್ ಐಆರ್ ಹಾಕಲು ಸಜ್ಜಾಗಿದ್ದಾರೆ. ಗಂಡನ ಮನೆಯವರು 20 ಲಕ್ಷ ರು.ಗಳ ಹಣಕ್ಕೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.

