ಸಿಂಧಗಿ: ಗಣೇಶ ವಿಸರ್ಜನೆಯ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಇಬ್ಬರು ಯುವಕರ ವಿರುದ್ಧ ಸಿಂಧಗಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸೆ.14 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಬಾದನಾಳು ಗ್ರಾಮದಲ್ಲಿ ಈ ಘಟನೆ ನಡೆದಿತ್ತು ಎನ್ನಲಾಗಿದೆ.
ಸೆ.14 ರ ಗಣೇಶ ವಿಸರ್ಜನೆ ವೇಳೆ ಲೈಸೆನ್ಸ್ ಪಿಸ್ತೂಲ್ ಹೊಂದಿದ್ದ ಪ್ರಶಾಂತ್ ಬೀರಾದಾರ್ ಎಂಬ ಯುವಕ ಗಣೇಶನ ಮೆರವಣಿಗೆ ವೇಳೆ ಪಿಸ್ತೂಲ್ ಒಟ್ಟುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಂಬ ಆರೋಪ ಕೇಳಿಬಂದಿದೆ.
ಈ ವೇಳೆ ಆತನ ಜತೆಗಿದ್ದ ಮತ್ತೊಬ್ಬ ವ್ಯಕ್ತಿ ಮುದುಕಪ್ಪ, ಪಿಸ್ತೂಲ್ ಪಡೆದು ಗಾಳಿಯಲ್ಲಿ ಎರಡು ಸುತ್ತಿನ ಗುಂಡು ಹಾರಿಸಿದ್ದಾನೆ. ಇಡೀ ಗ್ರಾಮದ ಜನತೆ ಗಣೇಶ ವಿಸರ್ಜನೆ ಖುಷಿಯ ಜತೆಗೆ ಗುಂಡು ಹಾರಿಸಿದ್ದನ್ನು ಸಂಭ್ರಮಿಸಿದ್ದರು ಎನ್ನಲಾಗಿದೆ.
ಈ ಘಟನೆಯ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಸಿಂಧಗಿ ಪಟ್ಟಣ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಲೈನ್ಸಸ್ ಹೊಂದಿದ್ದ ವ್ಯಕ್ತಿಯ ಬದಲಿಗೆ ಮತ್ತೊಬ್ಬ ವ್ಯಕ್ತಿ ಗನ್ ಬಳಕೆ ಮಾಡಿದ್ದ ಬಗ್ಗೆ ಬಹಿರಂಗ ವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
