ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ತರವಾದ ಹೆಜ್ಜೆಯನ್ನಿಟ್ಟಿದ್ದು, ಗೃಹಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಿದೆ.
ರಾಜ್ಯದಲ್ಲಿ ಪ್ರತಿ ವರ್ಷ ಏಳರಿಂದ ಎಂಟು ಸಾವಿರ ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಲ್ಲಿ ಬೆಂಗಳೂರು ನಗರದಲ್ಲಿಯೇ ಶೇ. 50 ರಷ್ಟು ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಮಂಗಳೂರು ನಗರದಲ್ಲಿ ಶೇ.22 ರಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಟಾಸ್ಕ್ ಪೋರ್ಸ್ ರಚಿಸಿ, ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ.
ಸಮಿತಿಯಲ್ಲಿ ಗೃಹಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷರಾಗಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸದಸ್ಯರಾಗಿರಲಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತೊಯೊಂದನ್ನು ರಚನೆ ಮಾಡಿ, ಡ್ರಗ್ಸ್ ಪ್ರಕರಣಗಳ ಕಡಿವಾಣಕ್ಕೆ ನಗರ ಭಾಗದಲ್ಲಿ ಎಸಿಪಿ ಮತ್ತು ಡಿಸಿಪಿಗಳನ್ನು ಗ್ರಾಮಾಂತರ ಭಾಗದಲ್ಲಿ ಡಿವೈಎಸ್ ಪಿ ಮತ್ತು ಎಸ್ ಪಿಗಳನ್ನು ಹೊಣೆಯಾಗಿಸಲು ತೀರ್ಮಾನಿಸಲಾಗಿದೆ.
ಡ್ರಗ್ಸ್ ಪ್ರಕರಣಗಳ ತಡೆಗೆ ವಿಫಲವಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಸರಕಾರ ನಿರ್ಧರಿಸಿದೆ. ಅಧಿಕಾರಿಗಳ ಅಮಾನತು ಮಾಡುವ, ವಜಾಗೊಳಿಸುವ ಅಥವಾ ಇನ್ನಿತರೆ ಕಾನೂನು ಕ್ರಮಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಲು ನಿರ್ಧರಿಸಿದೆ.
ಮತ್ತಷ್ಟು ಬಿಗಿಕ್ರಮಕ್ಕೆ ತೀರ್ಮಾನ: ಈ ನಡುವೆ ಡ್ರಗ್ಸ್ ನಿಯಂತ್ರಣ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸುವ ಸಲುವಾಗಿ ಕನಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಚಿಂತನೆ ನಡೆದಿದೆ. ತ್ವರಿತ ನ್ಯಾಯಾಲಯ ಸ್ಥಾಪಿಸಿ, ಶೀಘ್ರದಲ್ಲೇ ಪ್ರಕರಣ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.