ಬೆಂಗಳೂರು: ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ವಿರೋಧ ಪಕ್ಷಗಳ ಜೊತೆ ಸಮಾಲೋಚನೆಯನ್ನೂ ಮಾಡದೇ ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲು ಹೊರಟಿರುವುದು ನರೇಂದ್ರ ಮೋದಿ ಸರ್ಕಾರದ ದುಷ್ಟ ಉದ್ದೇಶವನ್ನು ಅನಾವರಣಗೊಳಿಸಿದೆ ಹಾಗೂ ಇದನ್ನು ಅನುಷ್ಠಾನಗೊಳಿಸಲು ಕೂಡಾ ಅಸಾಧ್ಯವಾದುದು
ಎಂದಿದ್ದಾರೆ.
ಇದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಲೋಕಸಭೆ ಇಲ್ಲವೇ ವಿಧಾನಸಭೆಯಲ್ಲಿ ಆಡಳಿತಾರೂಢ ಪಕ್ಷ ವಿಶ್ವಾಸಮತ ಗಳಿಸಲು ಸೋತುಹೋಗುವ ಸಂದರ್ಭದಲ್ಲಿ ಎದುರಾಗುವ ಬಿಕ್ಕಟ್ಟಿಗೆ ಈ ಪ್ರಸ್ತಾವದಲ್ಲಿ ಪರಿಹಾರವೇ ಇಲ್ಲ ಎಂದರು.
ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಯೊಂದೇ ಯೋಗ್ಯ ಪರಿಹಾರ. ಇದರ ಬದಲಿಗೆ ಸದನದಲ್ಲಿ ವಿಶ್ವಾಸ ಮತ ಗಳಿಸಲು ವಿಫಲವಾದ ಅಲ್ಪಸಂಖ್ಯಾತ ಪಕ್ಷ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುವ ದ್ರೋಹವಾಗುತ್ತದೆ ಎಂದರು.
ಆಡಳಿತಾರೂಢ ಬಿಜೆಪಿ ಪಕ್ಷದ ಗುಪ್ತ ಅಜೆಂಡಾವನ್ನು ಒಳಗೊಂಡಿರುವ ಒಂದು ದೇಶ, ಒಂದು ಚುನಾವಣೆ ಪ್ರಸ್ತಾವವನ್ನು ಸಂಸತ್ನ ಒಳಗೆ ಮತ್ತು ಹೊರಗೆ ನಮ್ಮ ಪಕ್ಷ ಎದುರಿಸಲಿದೆ. ದೇಶದ ಜನಾಭಿಪ್ರಾಯವೂ ‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆಗೆ ವಿರುದ್ಧವಾಗಿದೆ. ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.
