ಬೆಂಗಳೂರು: ಕೆ.ಆರ್. ನಗರದ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಭವಾನಿ ರೇವಣ್ಣಗೆ ಇಂದು ಸುಪ್ರೀಂ ಕೋರ್ಟ್ ವಿಚಾರಣೆ ಢವಢವ ತರಿಸಿದೆ.
ಸುಪ್ರೀಂ ಕೋರ್ಟ್ ಇಂದು ಎಸ್ಐಟಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಲಿದೆ. ಪ್ರಕರಣದಲ್ಲಿ ಭವಾನಿ ರೇವಣ್ಣಗೆ ಹೈಕೋರ್ಟ್ ಜಾಮೀನು ನೀಡಿತ್ತು, ಈ ಜಾಮೀನು ಪ್ರಶ್ನಿಸಿ ಎಸ್ಐಟಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇಂದು ವಿಚಾರಣೆ ನಡೆಯಲಿದೆ.
ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂಬ ಸಂತ್ರಸ್ತ ಮಹಿಳೆಯೊಬ್ಬರನ್ನು ಭವಾನಿ ರೇವಣ್ಣ ಆಜ್ಞೆಯ ಮೇರೆಗೆ ಕಿಡ್ನಾಪ್ ಮಾಡಲಾಗಿತ್ತು. ಆಕೆಯನ್ನು ತೋಡದ ಮನೆಯಲ್ಲಿ ಕೂಡಿಟ್ಟು, ಆಕೆಯಿಂದ ವಿಡಿಯೋ ಮಾಡಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದ ಎಸ್ಐಟಿ ಪೊಲೀಸರು, ಭವಾನಿ ರೇವಣ್ಣ ಬಂಧನಕ್ಕೆ ಸಜ್ಜಾಗಿದ್ದರು. ಆದರೆ, ಹೈಕೋರ್ಟ್ ಅವರಿಗೆ ಜಾಮೀನು ನೀಡಿದ್ದರಿಂದ ಎಸ್ಐಟಿ ಭವಾನಿ ಬಂಧನಕ್ಕೆ ಹಿನ್ನಡೆಯಾಗಿತ್ತು.
ಇದೀಗ ಎಸ್ಐಟಿ ಪರ ವಕೀಲರು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿ ಅವರ ಜಾಮೀನು ರದ್ದುಗೊಳಿಸಲು ಕೋರಿದ್ದಾರೆ. ಪ್ರಕರಣದ ಸಾಕ್ಷ್ಯಗಳ ನಾಶಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪ ಮುಂದಿಟ್ಟು ಜಾಮೀನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ ಮುಂದೆ ಮನವಿ ಮಾಡಲಿದ್ದಾರೆ.