ಬೆಂಗಳೂರು: ಕಾವೇರಿ ನದಿಗೆ ಕಾವೇರಿ ಆರತಿ ನಡೆಸಲು ಮುಂದಾಗಿರುವ ಸರ್ಕಾರ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಉತ್ತರಾಖಂಡ್ ನ ಹರಿದ್ವಾರಕ್ಕೆ ಭೇಟಿ ನೀಡಿ ಗಂಗಾರತಿ ವೀಕ್ಷಿಸಿ ಗಂಗಾರತಿ ಸಭಾದೊಂದಿಗೆ ಚರ್ಚೆ ನಡೆಸಿದರು.
ಶುಕರವಾರ ಹರಿದ್ವಾರಕ್ಕೆ ತೆರಳಿರುವ ನಿಯೋಗ ವಿಶೇಷ ಗಂಗಾರತಿಯಲ್ಲಿ ಭಾಗಿಯಾಗಿ ಪೂಜೆ ನಡೆಸಿತು ಮತ್ತು ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಜೊತೆ ಮಾತುಕತೆ ನಡೆಸಿ, ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಗಂಗಾರತಿ ಸಭಾದ ಮುಖ್ಯ ಕಾರ್ಯದರ್ಶಿ ತನ್ಮಯ ವಸಿಷ್ಠ, ಅಧ್ಯಕ್ಷ ನಿತಿನ್ ಗೌತಮ್, ಸಭಾಪತಿ ಕೃಷ್ಣಕುಮಾರ್ ಶರ್ಮಾ ಭಾಗಿಯಾಗಿದ್ದರು.
ನಿಯೋಗವು ಶನಿವಾರ ವಾರಾಣಸಿಗೆ ತೆರಳಿ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ ವೀಕ್ಷಿಸಲಿದ್ದು, ಭಾನುವಾರ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವುದರ ಜೊತೆಗೆ ಘಾಟ್‌ನಲ್ಲಿ ಸಂಚರಿಸಿ, ಅಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಉತ್ತರಾಖಂಡ್ನ ಹರಿದ್ವಾರದ ಗಂಗಾರತಿ ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಸರ್ಕಾರದಿಂದ ಯಾವುದೇ ಸಹಾಯ ನಲಪಡೆಯುತ್ತಿಲ್ಲ. ಎಲ್ಲವೂ ದಾನಿಗಳಿಂದಲೇ ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರದಿಂದ ಧನ ಸಹಾಯ ಪಡೆದರೆ 5 ವರ್ಷ ಅಥವಾ 10 ವರ್ಷ ಮಾತ್ರ ನಡೆಯುತ್ತೆ.
ಮುಂದೆ ಬರುವ ಸರ್ಕಾರ ಅದನ್ನು ಮುಂದುವರಿಸದೆ ಇರಬಹುದು. ಗಂಗಾ ನದಿ ಧಾರ್ಮಿಕ ಹಿನ್ನೆಲೆಯುಳ್ಳ ನದಿ, ಈ ಸ್ಥಳಕ್ಕೆ ಐತಿಹ್ಯ ಇದೆ. ಇದೇ ರೀತಿ ಕಾವೇರಿ ನದಿ ಇತಿಹಾಸ, ಧಾರ್ಮಿಕತೆ ಹಿನ್ನೆಲೆ ಇರಿಸಿಕೊಂಡು, ಕಾವೇರಿ ಆರತಿ ಮಾಡಿದರೆ ಸೂಕ್ತ ಎಂದು ಗಂಗಾರತಿ ಸಭಾ ಸಲಹೆ ನೀಡಿದೆ.
ಗಂಗಾ ಆರತಿ ವೀಕ್ಷಣೆ ನಂತರ ಮಾತನಾಡಿದ ಸಚಿವ ಚಲುವರಾಯಸ್ವಾಮಿಯವರು, ಕಾವೇರಿ ಆರತಿಗೆ ಎರಡು, ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಅಂತಿಮಗೊಂಡ ಸ್ಥಳದಲ್ಲಿ ಆರತಿಗಾಗಿ ಸೋಪಾನೆಕಟ್ಟೆ ನಿರ್ಮಿಸಲಾಗುವುದು. ಹರಿದ್ವಾರದಲ್ಲಿ ನಿತ್ಯ ಗಂಗಾ ಆರತಿ ನಡೆಯುತ್ತಿದೆ. ರಾಜ್ಯದಲ್ಲಿ ವಾರದಲ್ಲಿ ಎರಡು ಅಥವಾ ಮೂರು ದಿನ ಆರತಿ ಮಾಡಬೇಕೆ? ನಿತ್ಯ ಆರತಿ ನಡೆಸಬೇಕೇ ಎಂಬುದರ ಬಗ್ಗೆ ಸಮಿತಿ ಜತೆ ಚರ್ಚಿಸಿ ನಿರ್ಧರಿಸಲಾಗುವುದು. ಆರಂಭದಲ್ಲಿ ಹರಿದ್ವಾರ ಮತ್ತು ವಾರಾಣಸಿಯ ಸಾಧು, ಸಂತರನ್ನು ಆಹ್ವಾನಿಸಿ ಅವರಿಂದ ಕಾವೇರಿ ಆರತಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ಕಾವೇರಿಗೆ ಆರತಿ ಯೋಜನೆ ರೂಪಿಸಲಾಗುತ್ತಿದ್ದು, ಅಧ್ಯಯನ ನಡೆಸಲು ಚಾಮರಾಜನಗರ, ಮೈಸೂರು, ಮಂಡ್ಯ, ಮಡಿಕೇರಿ ಭಾಗದ ಶಾಸಕರ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯಲ್ಲಿ ಶಾಸಕರಾದ ನರೇಂದ್ರಸ್ವಾಮಿ, ಶಿವಲಿಂಗೇಗೌಡ, ರಮೇಶ್ ಬಂಡಿ ಸಿದ್ದೇಗೌಡ, ಉದಯ್ ಗೌಡ, ರವಿಕುಮಾರ್ ಗಣಿಗ, ಮಾಗಡಿ ಬಾಲಕೃಷ್ಣ, ಹರೀಶ್ಗೌಡ, ದರ್ಶನ್ ಧ್ರುವನಾರಾಯಣ್ ಇದ್ದು, ಚಿತ್ರನಟ ಸಾಧುಕೋಕಿಲ ಇದ್ದರು.

