ಸುದ್ದಿ

ಗೋರಿಪಾಳ್ಯ ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್ ಜಡ್ಜ್ ವಿರುದ್ಧ ಸುಪ್ರೀಂ ವಿಚಾರಣೆ

Share It

ನವದೆಹಲಿ: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಪ್ರಕರಣವೊಂದರ ವಿಚಾರಣೆ ವೇಳೆ ಬೆಂಗಳೂರಿನ ನಿರ್ದಿಷ್ಟ ಪ್ರದೇಶವನ್ನು ‘ಪಾಕಿಸ್ತಾನ’ಕ್ಕೆ ಹೋಲಿಸಿದ ಸಂಬಂಧ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಸುಪ್ರೀಂ ಕೋರ್ಟ್ ನ್ಯಾಯಪೀಠವು ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ರಿಂದ ವರದಿ ಕೇಳಿದೆ. ಜತೆಗೆ, ಅಟಾರ್ನಿ ಜನರಲ್ ಹಾಗೂ ಸಾಲಿಸಿಟರ್ ಜನರಲ್ ಅಭಿಪ್ರಾಯ ಕೇಳಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಎರಡು ವಾರ ಮುಂದೂಡಿಕೆ ಮಾಡಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ವಿ ಶ್ರೀಶಾನಂದ ಅವರು ವಿಚಾರಣೆಯೊಂದರ ವೇಳೆ ಪಾಕಿಸ್ತಾನ ಹೋಲಿಕೆ ಹೇಳಿಕೆ ನೀಡಿದ್ದರು ಎಂಬ ಆರೋಪವಿದೆ. ಹೇಳಿಕೆ ಕುರಿತ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ವಿಚಾರಣೆಯೊಂದರ ವೇಳೆ, ಮೈಸೂರು ರಸ್ತೆ ಮೇಲ್ಸೇತುವೆ ಬಳಿ ಹೋಗಿ ನೋಡಿ, ಪ್ರತಿ ಆಟೊ ರಿಕ್ಷಾದಲ್ಲಿ 10 ಮಂದಿ ಇರುತ್ತಾರೆ. ಅಲ್ಲಿ ಯಾವುದೂ ಅನ್ವಯವಾಗುವುದಿಲ್ಲ. ಏಕೆಂದರೆ ಕೆಆರ್ ಮಾರುಕಟ್ಟೆ ಮತ್ತು ಗೋರಿ ಪಾಳ್ಯ ವರೆಗೆ ಮೈಸೂರು ರೋಡ್ ಫ್ಲೈಓವರ್ ಪಾಕಿಸ್ತಾನದಲ್ಲಿದೆ, ಭಾರತದಲ್ಲಿಲ್ಲ. ಇದು ವಾಸ್ತವ. ನೀವು ಎಂಥವನೇ ಸ್ಟ್ರಿಕ್ಟ್ ಅಧಿಕಾರಿಗಳನ್ನು ಅಲ್ಲಿಗೆ ಹಾಕಿ, ಹಿಡಿದರೆ ನೋಡ್ತೀನಿ ಎಂದು ನ್ಯಾಯಾಧೀಶರು ಹೇಳುವುದು ವಿಡಿಯೋದಲ್ಲಿದೆ.

ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದೆ.


Share It

You cannot copy content of this page