ರಾಜಕೀಯ ಸುದ್ದಿ

ಮಹಿಳಾ ಆಯೋಗದ ನೋಟಿಸ್ ಗೆ ತಡೆ: ಎಚ್.ಡಿ.ಕೆ.ಗೆ ರಿಲೀಫ್

Share It

ಬೆಂಗಳೂರು, (ಏಪ್ರಿಲ್ 19): ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯದ ಮಹಿಳೆಯರು ದಾರಿ ತಪ್ಪಿದ್ದಾರೆ ಎನ್ನುವ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಹೇಳಿಕೆ ಸಂಬಂಧ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಕುಮಾರಸ್ವಾಮಿಗೆ ನೋಟಿಸ್ ನೀಡಿದ್ದು, ಇದೀಗ ಈ ನೋಟಿಸ್ ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಇದರಿಂದ ಲೋಕಸಭಾ ಚುನಾವಣೆ ವೇಳೆ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ದೂರುಗಳು ಇಲ್ಲದಿದ್ದರೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದ್ದು, ಸ್ವತಃ ಅಧ್ಯಕ್ಷೆ ಸ್ಪಷ್ಟೀಕರಣ ಕೇಳಿ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪರ ವಕೀಲ ಎ.ವಿ.ನಿಶಾಂತ್ ವಾದ ಮಂಡಿಸಿದರು. ಈ ವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ರಾಜ್ಯ ಮಹಿಳಾ ಆಯೋಗದ ನೋಟಿಸ್​ಗೆ ತಡೆ ನೀಡಿ ಆದೇಶ ಹೊರಡಿಸಿದೆ. ಕಾರಣ ಕೇಳಿ ಎಚ್.ಡಿ.ಕುಮಾರಸ್ವಾಮಿಗೆ ನೋಟಿಸ್ ನೀಡಿಲ್ಲ, ಸಮನ್ಸ್ ನೀಡಿಲ್ಲ. ಸ್ಪಷ್ಟೀಕರಣ ನೀಡಿ ಇಲ್ಲವಾದರೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ರಾಜ್ಯ ಮಹಿಳಾ ಆಯೋಗದ ಕ್ರಮ ವ್ಯಾಪ್ತಿ ಮೀರಿದಂತಿದೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.

ತುರುವೇಕೆರೆಯಲ್ಲಿ ಲೋಕಸಭೆ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ, “ಕಾಂಗ್ರೆಸ್ ಸರಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದು, ಹಳ್ಳಿಯ ಹೆಣ್ಣು ಮಕ್ಕಳ ಬದುಕು ಏನಾಗಬೇಕು ಎಂಬುದರ ಕುರಿತು ಯೋಚನೆ ಮಾಡಬೇಕಾಗಿದೆ,” ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದಕ್ಕೀಡಾಗಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್​ ನಾಯಕರು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮುಗಿಬಿದ್ದಿದ್ದರು. ಅಲ್ಲದೇ ರಾಜ್ಯದೆಲ್ಲೆಡೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ರಾಜ್ಯ ಮಹಿಳಾ ಆಯೋಗ ಗಂಭೀರವಾಗಿ ಇದನ್ನು ಪರಿಗಣಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು. ಅಲ್ಲದೇ ಈ ಬಗ್ಗೆ ಒಂದು ವಾರದೊಳಗೆ ಸ್ಪಷ್ಟನೆ ನೀಡುವಂತೆ ನೋಟಿಸ್‌ ನೀಡಿತ್ತು. ಈ ನೋಟಿಸ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ರಾಜ್ಯ ಮಹಿಳಾ ಆಯೋಗದ ನೋಟಿಸ್​ಗೆ ತಡೆ ನೀಡಿದೆ.

“ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿರಬೇಕಾದವರು ಈ ರೀತಿ ಬಹಿರಂಗವಾಗಿ ಹೆಣ್ಣುಮಕ್ಕಳನ್ನು ಅವಮಾನಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ- 1995 ಪರಿಚ್ಛೇದ 10 (ಎ)ರ ಮೇರೆಗೆ ತಾವು ನೋಟಿಸ್ ತಲುಪಿದ 7 ದಿನಗಳೊಳಗೆ ಆಯೋಗಕ್ಕೆ ಖುದ್ದು ಹಾಜರಾಗಿ ಹೇಳಿಕೆ ಸಂಬಂಧ ಸೃಷ್ಟಿಕರಣ ನೀಡಬೇಕು, ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದ್ದರು.


Share It

You cannot copy content of this page