ಬೆಂಗಳೂರು: ಮೈಸೂರಿನ ಮುಡಾ ಸೈಟ್ ಹಗರಣದ ಬಗ್ಗೆ ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ನಡೆಸಲು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಅಂತ್ಯಗೊಳಿಸಿ ಕಾಯ್ದಿರಿಸಿದ ತೀರ್ಪನ್ನು ಬೆಂಗಳೂರಿನ ಹೈಕೋರ್ಟ್ ನಾಳೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನೀಡಲಿದೆ.
ನ್ಯಾ. ಎಂ. ನಾಗಪ್ರಸನ್ನ ನೇತೃತ್ವದ ಹೈಕೋರ್ಟಿನ ಏಕಸದಸ್ಯ ಪೀಠವು ನಾಳೆ ಮಂಗಳವಾರ (ಸೆಪ್ಟೆಂಬರ್ 24) ಮಧ್ಯಾಹ್ನ 12 ಗಂಟೆಗೆ ಮುಡಾ ಪ್ರಾಸಿಕ್ಯೂಶನ್ ವಿರುದ್ಧದ ಅರ್ಜಿಯ ತೀರ್ಪು ಪ್ರಕಟಿಸಲಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಸೈಟ್ ಹಗರಣದಲ್ಲಿ ಆರ್.ಟಿ.ಐ ಕಾರ್ಯಕರ್ತ ಹಾಗೂ ವಕೀಲ ಟಿ.ಜೆ ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರನ್ನು ಸ್ವೀಕರಿಸಿದ್ದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ನಡೆಸಲು ಅನುಮತಿ ನೀಡಿದ್ದರು.
ಬಳಿಕ ಇದೇ ಮುಡಾ ಸೈಟ್ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ಕುಮಾರ್ ಅವರು ಪ್ರತ್ಯೇಕವಾಗಿ ಖಾಸಗಿ ದೂರು ನೀಡಿದ್ದರು.
ಒಟ್ಟಾರೆ ಟಿ.ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ಕುಮಾರ್ ಅವರ ಪರ ವಕೀಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ನಲ್ಲಿ ಮುಡಾ ಹಗರಣದ ಬಗ್ಗೆ ಪ್ರತ್ಯೇಕವಾಗಿ ಸಿಎಂ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಶನ್ ವಿರುದ್ಧದ ಅರ್ಜಿ ವಿರುದ್ಧ ಪ್ರತಿ ವಾದ ಮಂಡಿಸಿದ್ದರು.
ಜೊತೆಗೆ ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೇರಿದಂತೆ ಇಬ್ಬರು ಹಿರಿಯ ವಕೀಲರು ಹೈಕೋರ್ಟ್ ನಲ್ಲಿ ಪ್ರತಿ ವಾದ ಮಂಡಿಸಿದ್ದರು.
ಸಿಎಂ ಸಿದ್ದರಾಮಯ್ಯ ಅವರ ಅರ್ಜಿ ಪರವಾಗಿ ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಪ್ರೊ.ರವಿಕುಮಾರ್ ವರ್ಮಾ ಅವರು ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.
ಕಳೆದ ಸೆಪ್ಟೆಂಬರ್ 12 ರಂದು ವಾದ-ಪ್ರತಿವಾದ ಮಂಡನೆ ಬಳಿಕ ನ್ಯಾ ಎಂ. ನಾಗಪ್ರಸನ್ನ ನೇತೃತ್ವದ ಹೈಕೋರ್ಟಿನ ಏಕಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಆದರೆ ಪ್ರಾಸಿಕ್ಯೂಶನ್ ವಿರುದ್ಧದ ಅರ್ಜಿ ವಿಚಾರಣೆ ಅಂತ್ಯಗೊಳಿಸಿ ಕಾಯ್ದಿರಿಸಿದ ತೀರ್ಪನ್ನು ಯಾವ ದಿನ. ಯಾವ ಸಮಯ ಪ್ರಕಟಿಸಲಾಗುತ್ತದೆ ಎಂದು ಹೈಕೋರ್ಟಿನ ಏಕಸದಸ್ಯ ಪೀಠ ತಿಳಿಸಿರಲಿಲ್ಲ.
ಆದರೆ ಈಗ ನಾಳೆ ಹೈಕೋರ್ಟ್ ಮುಡಾ ಸೈಟ್ ಹಗರಣದ ಪ್ರಾಸಿಕ್ಯೂಶನ್ ವಿರುದ್ಧದ ಅರ್ಜಿ ತೀರ್ಪನ್ನು ಪ್ರಕಟಿಸುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಇಡೀ ದೇಶವನ್ನೇ ಕುತೂಹಲದಲ್ಲಿಟ್ಟಿದೆ.

