ರಾಜಕೀಯ ಸುದ್ದಿ

ಮುಡಾ ಹಗರಣದ ತನಿಖೆಗೆ ಜನಪ್ರತಿನಿಧಿಗಳ ಕೋರ್ಟ್ ಸೂಚನೆ!

Share It

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ತನಿಖೆಗೆ ಸೂಚನೆ ನೀಡಿದೆ.

ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಸ್ನೇಹಮಯಿ ಕೃಷ್ಣ ಹಾಗೂ ಟಿ.ಜೆ.ಅಬ್ರಹಾಂ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಯಿತು.

ದೂರುದಾರರ ಪರವಾಗಿ ವಕೀಲ ಲಕ್ಷ್ಮೀ ಅಯ್ಯಂಗಾರ್‌ ವಾದ ಮಂಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ನೀಡಿರುವ ಪೂರ್ವಾನುಮತಿ ಹಾಗೂ ಅದನ್ನು ಪ್ರಶ್ನಿಸಿ ಸಿದ್ದರಾಮಯ್ಯನವರು ಹೈಕೋರ್ಟ್‌ಗೆ ಸಲ್ಲಿಸಿದ್ದ ರಿಟ್‌ ಅರ್ಜಿ ಮತ್ತು ಈ ಕುರಿತು ಹೈಕೋರ್ಟ್‌ ನೀಡಿರುವ ತೀರ್ಪನ್ನು ಜನಪ್ರತಿನಿಧಿಗಳ ನ್ಯಾಯಾಲಯದ ಗಮನಕ್ಕೆ ತಂದರು.

ಈ ವೇಳೆ ನ್ಯಾಯಾಧೀಶರು ಕಾನೂನು ಪ್ರಕ್ರಿಯೆಯನ್ನು ಹೊಸದಾಗಿ ಜಾರಿಯಾಗಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌‍ಎಸ್‌‍) ಅಡಿ ಅಥವಾ ಈ ಮೊದಲು ಜಾರಿಯಲ್ಲಿದ್ದ ಕೋಡ್‌ ಆಫ್‌ ಕ್ರಿಮಿನಲ್‌ ಪ್ರೊಸಿಸರ್‌(ಸಿಆರ್‌ಪಿಸಿ) ಅಡಿ ಮುಂದುವರೆಸಬೇಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಅರ್ಜಿದಾರರ ಪರ ವಕೀಲರು, ಹೊಸದಾಗಿ ಜಾರಿಯಾಗಿರುವ ಬಿಎನ್‌ಎಸ್‌‍ಎಸ್‌‍ ಅಡಿಯೇ ಕಾನೂನು ಪ್ರಕ್ರಿಯೆಗಳಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದರು. ಒಂದು ವೇಳೆ ವಿಚಾರಣೆ ವೇಳೆ ಕಾನೂನಿನ ಸಂಘರ್ಷ ಎದುರಾದರೆ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ.

ಸದ್ಯಕ್ಕೆ ಬಿಎನ್‌ಎಸ್‌‍ಎಸ್‌‍ ಅಡಿಯೇ ಕಾನೂನು ಪ್ರಕ್ರಿಯೆಗಳಿಗೆ ಸೂಚನೆ ನೀಡಬೇಕು ಎಂದು ಸಲಹೆ ನೀಡಿದರು. ಈ ವೇಳೆ ನ್ಯಾಯಾಧೀಶರು ಕಲಾಪವನ್ನು ಕೆಲಕಾಲ ಮುಂದೂಡಿದರು. ನಂತರ ನ್ಯಾಯಾಲಯದ ಕಲಾಪ ಮರು ಸಮಾವೇಶಗೊಂಡಾಗ ನ್ಯಾಯಾಧೀಶರು ತಮ ತೀರ್ಪನ್ನು ಪ್ರಕಟಿಸಿದರು.

ಕಾನೂನು ಪ್ರಕ್ರಿಯೆ ಜಿಜ್ಞಾಸೆ : ಮುಡಾ ನಿವೇಶನ ಹಂಚಿಕೆ ಪ್ರಕರಣ 2004 ರಿಂದಲೂ ಆರಂಭಗೊಳ್ಳಲಿದೆ. ಬಿಎನ್‌ಎಸ್‌‍ಎಸ್‌‍ 2024 ರ ಜುಲೈ 1 ರಿಂದ ಅನುಷ್ಠಾನಕ್ಕೆ ಬಂದಿದ್ದು, ಅನಂತರ ಘಟಿಸಿದ ಅಪರಾಧಗಳನ್ನು ಹೊಸ ಪದ್ಧತಿಯಡಿ ವಿಚಾರಣೆ ನಡೆಸಬೇಕಾಗುತ್ತದೆ. ಹಳೆಯ ಪ್ರಕರಣ ಆಗಿರುವುದರಿಂದ ಸಿಆರ್‌ಪಿಸಿಯನ್ನೇ ಪಾಲನೆ ಮಾಡಬೇಕು ಎಂಬ ವಾದಗಳು ಇವೆ.

ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆಗೆ ಪೂರ್ವಾನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದ ದೂರುದಾರರಾದ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್‌ ಕುಮಾರ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್‌ 17 ಎ ಮತ್ತು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌‍) ಕಾಯಿದೆ ಸೆಕ್ಷನ್‌ 218 ರ ಅಡಿ ತನಿಖೆ ಹಾಗೂ ಅಭಿಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿದರು.

ರಾಜ್ಯಪಾಲರು ಪೂರ್ವಾನುಮತಿಯನ್ನು ನೀಡಿದರು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಭ್ರಷ್ಟಾಚಾರ ನಿಗ್ರಹ ಕಾಯಿದೆ 17 ಎ ಅಡಿ ತನಿಖೆಗೆ ರಾಜ್ಯಪಾಲರು ಪೂರ್ವಾನುಮತಿ ನೀಡಿರುವುದನ್ನು ಎತ್ತಿಹಿಡಿದಿತ್ತು. ಬಿಎನ್‌ಎಸ್‌‍ 218ರ ಅಡಿ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದರು.

ಇಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೈಕೋರ್ಟ್‌ ತೀರ್ಪಿನ ದೃಢೀಕೃತ ಪ್ರತಿಯನ್ನು ಸಲ್ಲಿಸಲಾಯಿತು. ವಿಚಾರಣೆ ಹಂತದಲ್ಲಿ ಅನುಸರಿಸಬೇಕಾದ ಕಾನೂನು ಪ್ರಕ್ರಿಯೆಗಳ ಬಗ್ಗೆ ಜಿಜ್ಞಾಸೆ ವ್ಯಕ್ತವಾಗಿತ್ತು. ಅದಕ್ಕೆ ಸ್ಪಷ್ಟನೆ ಸಿಕ್ಕ ಬಳಿಕ ಜನಪ್ರತಿನಿಧಿಗಳ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಿದೆ.

ಇದರಿಂದಾಗಿ ಸಿದ್ದರಾಮಯ್ಯನವರಿಗೆ ಮತ್ತಷ್ಟು ಸಂಕಷ್ಟಗಳು ಎದುರಾಗಿವೆ. ಹೈಕೋರ್ಟ್‌ ನಿನ್ನೆ ನೀಡಿದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ಮೇಲನವಿ ಸಲ್ಲಿಸಲು ಮುಖ್ಯಮಂತ್ರಿಯವರ ಕಾನೂನು ತಂಡ ತಯಾರಿ ನಡೆಸಿತು.

ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟವನ್ನು ಮುಂದುವರೆಸಬೇಕೇ ಎಂಬ ಬಗ್ಗೆ ಚರ್ಚೆಗಳು ನಡೆದಿದ್ದವು. ಇದರ ನಡುವೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಮತ್ತೊಂದು ಸಂಕಷ್ಟವನ್ನು ತಂದೊಡ್ಡಿದೆ.


Share It

You cannot copy content of this page