ರಾಜಕೀಯ ಸುದ್ದಿ

ಮುಡಾ ಪ್ರಾಸಿಕ್ಯೂಶನ್: ಸಿದ್ದರಾಮಯ್ಯ ನೀಡಿದ ವರದಿಯಿಂದ ಎಐಸಿಸಿಗೆ ಹಿನ್ನಡೆ!

Share It

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಪ್ರಭಾವ ಬಳಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿರುವುದು ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಿದೆ.

ನಿನ್ನೆಯ ಜನಪ್ರತಿನಿಧಿಗಳ ಕೋರ್ಟ್ ಆದೇಶ ಬೆನ್ನಲ್ಲೇ ಹೈಕಮಾಂಡ್‌ಗೆ ಸಿಎಂ ಸಿದ್ದರಾಮಯ್ಯ ವರದಿ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಮೂಲಕ ಕೋರ್ಟ್ ಆದೇಶದ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ನಿನ್ನೆ ಬುಧವಾರ ಕೇರಳದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ಕಾರ್ಯಕ್ರಮ ಮುಗಿದ ಬಳಿಕ ತಮ್ಮ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಸಂಪೂರ್ಣ ವಿವರಣೆ ಕೊಟ್ಟಿದ್ದಾರೆ. ಕೇಸ್ ಬಗ್ಗೆ ಮಾಹಿತಿ ಜೊತೆಗೆ ಎಐಸಿಸಿ ಸಹಕಾರ ಕೇಳಿದ್ದಾರೆ.

ಎಐಸಿಸಿಗೆ ಸಿದ್ದರಾಮಯ್ಯ ವರದಿ ಏನು?

ಮುಡಾ ಕೇಸ್ ನಲ್ಲಿ ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ಧವಾಗಿದೆ. ಈ ಸಂಬಂಧ ಕಾನೂನು ಅಭಿಪ್ರಾಯ ಪಡೆಯುತ್ತಿದ್ದೇನೆ. ಆದರೆ ಮೇಲ್ಮನವಿಯಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ಕೇಂದ್ರಸರ್ಕಾರ, ಬಿಜೆಪಿ-ಜೆಡಿಎಸ್ ಪಕ್ಷದವರು ನನ್ನ ಮತ್ತು ನಮ್ಮ ಸರ್ಕಾರದ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ.

ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರನ್ನ ಬಳಕೆ ಮಾಡಿಕೊಂಡಿದ್ದಾರೆ. ವಿಪಕ್ಷಗಳ ಸರ್ಕಾರ ಕೆಡವೋದು ಕೇಂದ್ರದ ಅಜೆಂಡಾ. ಇದನ್ನು ರಾಜ್ಯದಲ್ಲೂ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ಕೊಡೋದು ಬೇಡ. ಮುಡಾ ಕೇಸ್‌ನಲ್ಲಿ ಪ್ರಾರಂಭದಲ್ಲಿ ಕೊಟ್ಟ ಬೆಂಬಲವನ್ನು ಕೊಡಿ.
ಮುಡಾ ಕೇಸ್‌ನಲ್ಲಿ ನನ್ನದೇನು ತಪ್ಪಿಲ್ಲ. ಹೀಗಾಗಿ ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ. ತನಿಖೆ ಆಗಲಿ, ನಾನು ತನಿಖೆ ಎದುರಿಸುತ್ತೇನೆ. ನನಗೆ ಯಾವುದೇ ಭಯವಿಲ್ಲ. ರಾಜೀನಾಮೆ ಕೊಡದೇ ನಾನು ತನಿಖೆ ಎದುರಿಸುತ್ತೇನೆ. ನಿಮ್ಮ ಸಹಕಾರ ಬೇಕು ಎಂದು ಸಿಎಂ ಸಿದ್ದರಾಮಯ್ಯ ಎಐಸಿಸಿ ಸಹಕಾರ ಕೇಳಿದ್ದಾರೆ.

ಆದರೆ 2011 ರಲ್ಲಿ ಇದೇ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿ ಆಗ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಂದ ಪ್ರಾಸಿಕ್ಯೂಶನ್ ಅನುಮತಿಗೆ ಗುರಿಯಾಗಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸೂಕ್ತ ರೀತಿಯಲ್ಲಿ ತನಿಖೆ ಮಾಡಲು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಅಂದಿನ ಸಿದ್ದರಾಮಯ್ಯರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರಿ ವೈರಲ್ ಆಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿಸಿದೆ.

ಜೊತೆಗೆ ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸದನಗಳಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಶನ್ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರಕ್ಕೆ ಬಲುದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಏಕೆಂದರೆ ಸ್ವತಃ ಬಿಎಸ್ಸಿ, ಎಲ್.ಎಲ್.ಬಿ ಓದಿ ಕಾನೂನು ತಿಳಿದಿರುವ ಸಿಎಂ ಸಿದ್ದರಾಮಯ್ಯ ಹೀಗೇಕೆ ಅಧಿಕಾರಕ್ಕೆ ಅಂಟಿಕೊಂಡು ಇಂಡಿಯಾ ಮೈತ್ರಿಕೂಟಕ್ಕೆ ಕಳಂಕ ತಂದಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಇಂಡಿಯಾ ಮೈತ್ರಿಕೂಟದ ನಾಯಕರು ಒಳಗೊಳಗೆ ಕಿಡಿಕಾರಿದ್ದಾರೆ.
ಇದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿನ್ನೆಡೆ ತಂದಿದೆ.


Share It

You cannot copy content of this page