ಬೆಂಗಳೂರು: ಬೆಳ್ಳಂದೂರಿನಲ್ಲಿನ ಟ್ರಾಫಿಕ್ ನಿವಾರಿಸಲು ರಕ್ಷಣಾ ಇಲಾಖೆಯಿಂದ 22 ಎಕರೆ ಜಮೀನು ಖರೀದಿಸುತ್ತಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿದಿದ್ದಾರೆ.
ಶನಿವಾರ (ಸೆ.28) ರಂದು ಹಿರಿಯ ಸೇನಾಧಿಕಾರಿ, ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್‌ವಾಲ್ ಅವರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿ ಮಾತನಾಡಿದರು.
ಜಮೀನು ಖರೀದಿ ಸಂಬಂಧ ಈಗಾಗಲೆ ರಕ್ಷಣಾ ಇಲಾಖೆ ಮಂತ್ರಿ ಮತ್ತು ಅಧಿಕಾರಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಗಿದೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ರಸ್ತೆ ನಿರ್ಮಾಣಕ್ಕೆ 12 ಎಕರೆ ಜಮೀನು ಕೊಡಲು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಿದರು.
ಐಟಿ ಹಬ್ ಎನಿಸಿಕೊಂಡಿರುವ ಬೆಳ್ಳಂದೂರು ನಿವಾಸಿಗಳು ನಿತ್ಯ ಟ್ರಾಫಿಕ್ ದಟ್ಟಣೆಯಿಂದ ಕಿರಿಕಿರಿ ಅನುಭವಿಸುತ್ತಿದ್ದರು. ಈ ಹಿನ್ನೆಲೆ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಮುಂದಾಗಿದೆ.
ಈಜೀಪುರ ಹಾಗೂ ಬೆಳ್ಳಂದೂರು ನಡುವಿನ ರಸ್ತೆಗಾಗಿ ಟೆಂಡರ್ ಕರೆಯಲಾಗಿದೆ.
ಹೆಬ್ಬಾಳ ಕಡೆ ರಸ್ತೆ ನಿರ್ಮಾಣಕ್ಕೂ 10 ಎಕರೆ ಜಾಗ ನೀಡಿ ಅಂತ ಕೇಳಲಾಗಿದೆ. ಒಟ್ಟು 22 ಎಕರೆ ನೀಡಿ ಎಂದು ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.