ಲೋಕಾಯುಕ್ತ ಎಡಿಜಿಪಿ ವಿರುದ್ಧ ಮತ್ತೇ ಮುಗಿಬಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಕೇಂದ್ರ ಸಚಿಚ ಎಚ್.ಡಿ.ಕುಮಾರಸ್ವಾಮಿ, ಡೀಲ್ ಮಾಡಿದವರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ ಎಂದಿದ್ದಾರೆ.
ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಹಂದಿ ಮತ್ತು ಆರೋಪಿ ಎಂದು ಸಂಬೋಧಿಸಿ ಪತ್ರ ಬರೆದಿದ್ದ ಎಡಿಜಿಪಿ, ಎಸ್ಐಟಿ ಮುಖ್ಯಸ್ಥರಾಗಿ ತಾವು ಸಮರ್ಥವಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಅಧಿಕಾರಿಯ ಭಾಷೆ ಆತನ ಸಂಸ್ಕೃತಿಯನ್ನು ಹೇಳುತ್ತದೆ ಎಂದಿದ್ದಾರೆ.
ಚಂದ್ರಶೇಖರ್ ಬ್ಲಾಕ್ ಮೇಲರ್, ಅವರು ಯಾರ ಜತೆ ಸಂಬಂಧ ಇಟ್ಟುಕೊಂಡಿದ್ದಾರೆ ನನಗೆ ಗೊತ್ತಿದೆ. 20 ಕೋಟಿ ಡೀಲ್ ಮಾಡಿದ್ದವರು, ನನಗೆ ಬುದ್ದಿ ಹೇಳ್ತಾರೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
ಎಡಿಜಿಪಿ ಎಂ.ಚಂದ್ರಶೇಖರ್ ನೇತ್ರತ್ವದಲ್ಲಿ ರಚನೆಯಾಗಿರುವ ಎಸ್ಐಟಿ ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧದ ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಎಚ್ಡಿಕೆ ಮತ್ತು ಚಂದ್ರಶೇಖರ್ ನಡುವೆ ವಾಕ್ಸಮರ ಜೋರಾಗಿದೆ. ಜೆಡಿಎಸ್ ಘಟಕ ಚಂದ್ರಶೇಖರ್ ಪತ್ನಿ ಹೆಸರಿನಲ್ಲಿ ರಾಜಕಾಲಿವೆ ಮೇಲೆ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತಿದೆ ಎಂಬ ಆರೋಪವನ್ನು ಮಾಡಿದೆ. ಹೀಗಾಗಿ, ಪರಸ್ಪರ ಕಾಲೆಳೆಯುವಿಕೆ ಜೋರಾಗಿದೆ.


