ಗಾಂಧಿ ಜಯಂತಿಯಂದೇ ಪಿತೃಪಕ್ಷ: ಮಾಂಸ ಮಾರಾಟ ನಿಷೇಧದ ಆದೇಶ ಸಡಿಲಿಸುವಂತೆ ಮನವಿ
ಬೆಂಗಳೂರು: ಗಾಂಧಿ ಜಯಂತಿಯಂದೇ ಪಿತೃಪಕ್ಷ ಹಬ್ಬ ಬಂದಿರುವಿದರಿಂದ ಅಂದು ಮಾಂಸ ಮಾರಾಟ ನಿಷೇಧದ ಆದೇಶವನ್ನು ಸಡಿಲಿಸುವಂತೆ ಬಿಬಿಎಂಪಿಗೆ ಕರ್ನಾಟಕ ಕೋಳಿ ವ್ಯಾಪಾರಿಗಳ ಸಂಘ ಮನವಿ ಮಾಡಿದೆ.
ಮಾಂಸ ಮಾರಾಟ ನಿಷೇಧ ಇರುವುದರಿಂದ ಪಿತೃಪಕ್ಷ ಹಬ್ಬ ಆಚರಿಸಲು ಅಡ್ಡಿಯಾಗುತ್ತಿದೆ. ಹೀಗಾಗಿ ವಿಶೇಷ ಸಂದರ್ಭವೆಂದು ಪರಿಗಣಿಸಿ ಆದೇಶವನ್ನು ಸಡಿಲಿಕೆ ಮಾಡುವಂತೆ ಮನವಿ ಮಾಡಿದ್ದು, ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರು ಮಧ್ಯಪ್ರವೇಶಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎನ್.ನಾಗರಾಜು ತಿಳಿಸಿದ್ದಾರೆ.
ಮಹಾಲಯ ಅಮಾವಾಸ್ಯೆಯ ಹಬ್ಬದಂದು ಮಾಂಸಾಹಾರ ಸಿದ್ಧಪಡಿಸಿ ತಮ್ಮ ಹಿರಿಯರಿಗೆ ಎಡೆ ಹಾಕಿ, ಪೂಜೆ ಮಾಡುವುದು ಪದ್ಧತಿ. ಈ ಬಾರಿ ಹಬ್ಬ ಗಾಂಧಿಜಯಂತಿ ದಿನವೇ ಬಂದಿದ್ದು, ಆ ದಿನ ಮಾಂಸ ಮಾರಾಟಕ್ಕೆ ನಿಷೇಧ ಇರುವುದರಿಂದ ಹಬ್ಬ ಆಚರಣೆಗೆ ಅಡಚಣೆಯಾಗಲಿದೆ. ಅದ್ದರಿಂದ ಸಡಿಲಿಕೆ ಮಾಡುವಂತೆ ಮನವಿ ಮಾಡಿದ್ದಾರೆ.
ಸರಕಾರ ಮತ್ತು ಪಾಲಿಕೆ ನಮ್ಮ ಮನವಿಗೆ ಮಣಿಯದಿದ್ದರೆ ಅ.1ರಂದು ಪೂರ್ವಭಾವಿಯಾಗಿ ಧಾರ್ಮಿಕ ವಿಧಿವಿಧಾನಗಳನ್ನು ಹಮ್ಮಿಕೊಳ್ಳುವಂತೆ ಜನರಿಗೆ ಮನವಿ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಸೆಲ್ವರಾಜ್ ತಿಳಿಸಿದ್ದಾರೆ.


