ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ಮಂಡ್ಯ: ಮೂಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು ಎಂದು ಆಗ್ರಹಿಸಿ ಅಭಿಮಾನಿಯೊಬ್ಬ ರಕ್ತದಲ್ಲಿ ಪತ್ರ ಬರೆದು ಒತ್ತಾಯಿಸಿದ್ದಾನೆ.
ಮಂಡ್ಯ ಜಿಲ್ಲೆಯ ಮೊತ್ತಹಳ್ಳಿಯ ಸಚ್ಚಿನ್ ಎಂಬ ಯುವಕ ರಕ್ತದಲ್ಲಿ ಪತ್ರ ಬರೆದು ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡದಂತೆ ಕೋರಿದ್ದಾನೆ. ಜತೆಗೆ, ದೇವರಾಜ ಅರಸು ಅವರ ಬಳಿಕ ಅತಿಹೆಚ್ಚು ಬಡವರ, ದಲಿತರ ಪರ ಕೆಲಸ ಮಾಡಿದ ನಾಯಕ ನೀವು ಎಂದು ಶ್ಲಾಘನೆ ಮಾಡಿದ್ದಾನೆ.
ಬಡವರ, ದಲಿತರ ಪರವಾದ ಅತಿಹೆಚ್ಚು ಯೋಜನೆಗಳನ್ನು ನೀವು ಜಾರಿಗೆ ತಂದಿದ್ದೀರಿ, ಹೀಗಾಗಿ, ನೀವು ರಾಜೀನಾಮೆ ನೀಡಬಾರದು. ನಿಮ್ಮ ಮೇಲೆ ಏನೇ ಆರೋಪಗಳು ಬಂದರೂ ನೀವು ದೈರ್ಯಗುಂದಬಾರದು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ಹೇಳಿದ್ದಾನೆ.


