ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತನಿಖೆಗೆ ಹೈಕೋರ್ಟ್ ತಡೆ
ಬೆಂಗಳೂರು: ಚುನಾವಣಾ ಬಾಂಡ್‌ಗಳ ಮೂಲಕ ಹಣ ವಸೂಲಿ ಮಾಡಿದ ಆರೋಪದ ಮೇಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಮತ್ತಿತರರ ವಿರುದ್ಧ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ಸಾಮಾಜಿಕ ಕಾರ್ಯಕರ್ತ ಆದರ್ಶ ಅಯ್ಯರ್ ಸಲ್ಲಿಸಿದ್ದ ದೂರಿನ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ನಳಿನ್ ಕುಮಾರ್ ಕಟೀಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ದೂರುದಾರ ನಷ್ಟ ಅನುಭವಿಸಿಲ್ಲ ಎಂಬ ಅಂಶವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ ಪ್ರಕರಣ ಮುಂದುವರೆದಲ್ಲಿ ಕಾನೂನು ಪ್ರಕ್ರಿಯೆ ದುರ್ಬಳಕೆಯಾಗಲಿದೆ ಎಂದು ಪೀಠ ತಿಳಿಸಿದ್ದು, ಮುಂದಿನ ವಿಚಾರಣೆವರೆಗೂ ಪ್ರಕರಣದ ತನಿಖೆಗೆ ತಡೆ ನೀಡಿ ಆದೇಶ ಹೊರಡಿಸಿದೆ.
ಅರ್ಜಿಯಲ್ಲಿ ಏನಿದೆ?: ನಿರ್ದಿಷ್ಟ ಆರೋಪಗಳಿಲ್ಲದೇ ಅಥವಾ ಯಾವುದೇ ತಪ್ಪನ್ನು ಉಲ್ಲೇಖಿಸದೇ ದಾಖಲಿಸಿರುವ ಆಕ್ಷೇಪಾರ್ಹ ದೂರು ರದ್ದು ಮಾಡಬೇಕು. ಚುನಾವಣಾ ಬಾಂಡ್ ಯೋಜನೆ ಮತ್ತು ಅದಕ್ಕೆ ಸಂಬಂಧಿತ ಶಾಸನಬದ್ಧ ತಿದ್ದುಪಡಿಗಳು ಜಾರಿಯಲ್ಲಿದ್ದಾಗ ಅದು ಕಾನೂನಿನ ಅನ್ವಯ ಸಿಂಧುವಾಗಿತ್ತು. ಜಾರಿಯಲ್ಲಿದ್ದ ಕಾನೂನಿನನ್ವಯ ಸಾರ್ವಜನಿಕ ಸೇವಕರು ಕ್ರಮ ಕೈಗೊಂಡಿದ್ದರೆ ಅದನ್ನು ಕ್ರಿಮಿನಲ್ ಆರೋಪದಲ್ಲಿ ನೋಡಲಾಗುವುದಿಲ್ಲ.


