ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ – ಗುರು ಶಿಷ್ಯರ ಸಮಾಗಮ
ತುಮಕೂರು: ಶಾಲೆಗಳಲ್ಲಿನ ಗಂಟೆಗಳ ಸದ್ದು ಹೆಚ್ಚು ಕೇಳುವ ದೇಶವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ ಶಿಕ್ಷಣವಂತ ವಿದ್ಯಾರ್ಥಿಗಳು ವೇಷಭೂಷಣದ ಬದಲಾಗಿ ಉತ್ತಮ ಆದರ್ಶದಿಂದ ಸಮಾಜದಲ್ಲಿ ಗುರುತಿಸಿಕೊಳ್ಳುವ ಮೂಲಕ ಶಿಕ್ಷಕರ ಋಣವನ್ನು ತೀರಿಸಬೇಕಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಸುನಂದ ರವರು ಕರೆ ನೀಡಿದರು.
ಇಂದು ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ಚಿಕ್ಕಯ್ಯನಪಾಳ್ಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಗುರು ಶಿಷ್ಯರ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ, ಹೀಗಾಗಿ ಪುರಾಣ ಪುಣ್ಯಗಳ ಕಾಲದಿಂದಲೂ ಅದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ, ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವ ಮೂಲಕ ಮತ್ತೊಂದು ವಿಶೇಷ ಅರ್ಥ ನೀಡುತ್ತಿರುವುದು ಸಂತಸದ ವಿಷಯ ಎಂದರು.
ಮತ್ತೊರ್ವ ನಿವೃತ್ತ ಶಿಕ್ಷಕರಾದ ಕಮಲಾಮ್ಮ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಖೇದದ ಸಂಗತಿಯಾದರೇ, ಇನ್ನೊಂದೆಡೆ ಕೆಲ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶಿಕ್ಷಕರ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಸುನಂದಮ್ಮ, ಕಮಲಮ್ಮ, ಅಂಗನವಾಡಿ ಶಿಕ್ಷಕರಾದ ಅನುಸೂಯ, ಸಹಾಯಕಿಯರಾದ ನರಸಮ್ಮ, ಚಿಕ್ಕತ್ತಾಯಮ್ಮ ಅವರಿಗೆ ಪುಷ್ಪವೃಷ್ಠಿ ಮಾಡಿ ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ಗ್ರಾಮದ ಮುಖಂಡರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


