ಹಾಲು ಖರೀದಿ ದರ ಇಳಿಕೆ : ಲೀಟರ್ ಗೆ ಎಷ್ಟು ರು. ಇಳಿಸಿದೆ ಗೊತ್ತಾ ಹಾಲು ಒಕ್ಕೂಟ?
ಬೆಂಗಳೂರು: ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಇಳಿಕೆ ಮಾಡಿರುವ ಶಿವಮೊಗ್ಗ ಹಾಲು ಒಕ್ಕೂಟ ರೈತರ ಮೇಲೆ ಬರೆ ಎಳೆದಿದೆ.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ವ್ಯಾಪ್ತಿಯ ರೈತರ ಜೀವನಾಡಿಯಾದ ಶಿಮೂಲ್ ಒಕ್ಕೂಟದಲ್ಲಿ ಹಾಲು ಖರೀದಿ ದರವನ್ನು ಕಡಿಮೆ ಮಾಡಲಾಗಿದೆ. ಪ್ರತಿ ಲೀಟರ್‌ಗೆ ೯೦ ಪೈಸೆ ದರವನ್ನು ಕಡಿಮೆ ಮಾಡಿದ್ದು, ಅಕ್ಟೋಬರ್ ೧ ರಿಂದಲೇ ದರ ನಿಗದಿ ಮಾಡಲಾಗಿದೆ.
ಈ ಬಗ್ಗೆ ರೈತರಿಗೆ ಇಂದು ಮಾಹಿತಿ ಸಿಕ್ಕಿದ್ದು, ರೈತರು ಹಾಲು ಒಕ್ಕೂಟದ ನಿರ್ಣಯವನ್ನು ಖಂಡಿಸಿದ್ದಾರೆ. ಸರಕಾರ ಐದು ರುಪಾಯಿ ಹಾಲಿನ ದರ ಹೆಚ್ಚಳ ಮಾಡುವ ಭರವಸೆ ನೀಡುತ್ತಿದ್ದೆ. ಇದೇ ಸಂದರ್ಭದಲ್ಲಿ ಶಿವಮೊಗ್ಗ ಹಾಲು ಒಕ್ಕೂಟ ೯೦ ಪೈಸೆ ಕಡಿಮೆ ಮಾಡಿರುವುದು ಸರಿಯಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರೈಕೆಯಲ್ಲಿ ಹೆಚ್ಚಳ ಮತ್ತು ಇನ್ನಿತರ ವೆಚ್ಚದ ನೆಪ ನೀಡಿರುವ ಒಕ್ಕೂಟ ಹಾಲು ದರ ಇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದೆ. ಇದು ರೈತರ ಆಕ್ರೋಶವನ್ನು ಹೆಚ್ಚಿಸಿದೆ.


