ಕಲಬುರಗಿ: ನಗರ ಹೊರವಲಯದ ಶಹಬಾದ್ ರಸ್ತೆಯ ಇಟ್ಟಿಗೆ ಭಟ್ಟಿಯಲ್ಲಿ ಪತಿಯೇ ಪತ್ನಿಯನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ಆಳಂದ ತಾಲೂಕಿನ ಕೊಡಲಹಂಗರಗಾ ಗ್ರಾಮದ ಪ್ರಿಯಾಂಕಾಳನ್ನ (35) ಅದೇ ತಾಲೂಕಿನ ನಿಂಬರ್ಗಾ ಗ್ರಾಮದ ವಕೀಲ್ ರಾಠೋಡ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಇವರು ಮಕ್ಕಳೊಂದಿಗೆ ಶಹಬಾದ್ ರಸ್ತೆಯಲ್ಲಿನ ಇಟ್ಟಿಗೆ ಭಟ್ಟಿ ಬಳಿ ಮನೆ ಮಾಡಿಕೊಂಡಿದ್ದರು.
ಹಿಗೇ ಅದೇ ಇಟ್ಟಿಗೆ ಭಟ್ಟಿಯಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡ್ತಿದ್ದ ದಂಪತಿ ನಿತ್ಯವೂ ಕಂಠಪೂರ್ತಿ ಕುಡಿಯುತ್ತಿದ್ದರು. ಅದರಂತೆ ಕಳೆದ ರಾತ್ರಿ ಇಬ್ಬರು ಎಣ್ಣೆ ಹೊಡೆದಿದ್ದಾರೆ. ಎಣ್ಣೆ ಮತ್ತಿನಲ್ಲಿ ಇಬ್ಬರ ಮಧ್ಯೆ ಜಗಳ ಶುರುವಾಗಿದ್ದು, ಜಗಳ ವಿಕೋಪಕ್ಕೆ ಹೋಗಿ ಅಲ್ಲೆ ಇದ್ದ ಇಟ್ಟಿಗೆಯಿಂದ ಪತ್ನಿ ಪ್ರಿಯಾಂಕಾಳ ತಲೆಗೆ ಜಜ್ಜಿ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಪತಿ ವಕೀಲ್ ರಾಠೋಡ್ ಮತ್ತು ಪತ್ನಿ ಪ್ರಿಯಾಂಕಾ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಾ, ಸಂಜೆಯಾದರೆ ಇಬ್ಬರೂ ಒಟ್ಟೊಟ್ಟಿಗೆ ಎಣ್ಣೆ ಹೊಡೆದು ಇಬ್ಬರು ಮಕ್ಕಳನ್ನ ನಿರ್ಲಕ್ಷ್ಯ ಮಾಡುತ್ತಿದ್ದರಿಂದ, ಕೆಲ ದಿನಗಳ ಹಿಂದೆ ಮಕ್ಕಳನ್ನ ಅಜ್ಜ ಅಜ್ಜಿ ಬಳಿ ಬಿಟ್ಟು ಬಂದಿದ್ದರು. ಕಳೆದ ರಾತ್ರಿ ಎಣ್ಣೆ ಪಾರ್ಟಿ ಶುರುವಾದಾಗ, ಎಣ್ಣೆ ವಿಚಾರಕ್ಕೆ ಇಬ್ಬರ ಮಧ್ಯ ಗಲಾಟೆ ಆಗಿದೆ. ಆ ವೇಳೆ ಅಕ್ಕಪಕ್ಕದವರು ಇವರ ಗಲಾಟೆ ದಿನಾಲೂ ಇದ್ದಿದ್ದೆ ಎಂದು ಸುಮ್ಮನಿದ್ದರು.
ಜಗಳದ ನಡುವೆ ಪತಿ ವಕೀಲ್ ರಾಠೋಡ್, ನಶೆಯಲ್ಲಿ ಪತ್ನಿಗೆ ಇಟ್ಟಿಗೆಯಿಂದ ಮನಬಂದಂತೆ ಥಳಿಸಿ ಕೊಲೆ ಮಾಡಿದ್ದಾನೆ. ಇನ್ನೂ ಮೃತದೇಹವನ್ನ ನಗರದ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆ ಮಾಡಲಾಗಿದೆ. ಆರೋಪಿ ಪತಿಯನ್ನ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.