ಬೆಂಗಳೂರು: ಇತ್ತೀಚೆಗೆ ಬಿಎಂಟಿಸಿ ಬಸ್ ಚಾಲಕನಿಗೆ ಚಾಕು ಇರಿದಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಹಲ್ಲೆ ಮತ್ತು ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಪ್ರಯಾಣಿಕ ಬಿಎಂಟಿಸಿ ಬಸ್ ನಿರ್ವಾಹಕ ಮತ್ತು ಚಾಲಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದ್ದಾನೆ. ಅತ್ತಿಬೆಲೆಯಿಂದ ಮೆಜಸ್ಟಿಕ್ಗೆ ಗುರುವಾರ ಸಂಜೆ 4:15ರ ಸುಮಾರಿಗೆ ಬಿಎಂಟಿಸಿ ವೋಲ್ವೋ ಬಸ್ ಹೋಗುತ್ತಿತ್ತು.
ಬೆದರಿಕೆ ಹಾಕಿದ ಪ್ರಯಾಣಿಕ ಕೊನಪ್ಪನ ಅಗ್ರಹಾರದಲ್ಲಿ ಬಸ್ ಹತ್ತಿದ್ದಾನೆ. ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ನೀಡಲು ಬಸ್ ಅನ್ನು ಅದೇ ನಿಲ್ದಾಣದಲ್ಲಿ ಕೆಲ ಹೊತ್ತು ನಿಲ್ಲಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಪ್ರಯಾಣಿಕ ಹೊಸ ರೋಡ್ ಬಸ್ ನಿಲ್ದಾಣದಲ್ಲಿ ಬಸ್ನಿಂದ ಇಳಿದು, ಬ್ಯಾಗ್ನಲ್ಲಿದ್ದ ಸ್ಕ್ರೂಡ್ರೈವರ್ ತೆಗೆದು, ಚಾಲಕ ಮತ್ತು ನಿರ್ವಾಹಕನಿಗೆ ತೋರಿಸಿ, ಚುಚ್ಚಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.