ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್ ಸಿಎಲ್ ಚಿಂತನೆ ಮಾಡಿದೆ.
ಈಗಾಗಲೇ ಟಿಕೆಟ್ ದರ ನಿಗದಿಗೆ ಬಿಎಂಆರ್ ಸಿಎಲ್ ಸಮಿತಿ ರಚಿಸಿದ್ದು, ವರದಿ ಸಲ್ಲಿಸಲು 90 ದಿನಗಳ ಕಾಲಾವಕಾಶ ನೀಡಿದೆ.
ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ಥರಾಣಿ ಅವರು ಸಮಿತಿ ಅಧ್ಯಕ್ಷರಾಗಿದ್ದರೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತ್ಯೇಂದ್ರ ಪಾಲ್ ಸಿಂಗ್ ಮತ್ತು ಕರ್ನಾಟಕದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಸದಸ್ಯರಾಗಿ ನೇಮಿಸಲಾಗಿದೆ.
ಪ್ರಸ್ತುತ, ನಮ್ಮ ಮೆಟ್ರೋ ಟಿಕೆಟ್ ಕನಿಷ್ಠ ದರವು 10 ರೂ. ಮತ್ತು ಗರಿಷ್ಠ 60 ರೂ. ಇದೆ. ಸ್ಮಾರ್ಟ್‌ಕಾರ್ಡ್‌ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಬಳಸುವ ಪ್ರಯಾಣಿಕರಿಗೆ ಶೇಕಡಾ 5 ರಷ್ಟು ರಿಯಾಯಿತಿ ಸಿಗುತ್ತದೆ.
ಮೂರು ವರ್ಷಗಳಿಂದ ಪ್ರಯಾಣ ದರದಲ್ಲಿ ಪರಿಷ್ಕರಣೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಇದೀಗ ಅಂತಿಮವಾಗಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಕಾರ್ಯಾಚರಣೆಯ ವೆಚ್ಚ, ಅಂತಾರಾಷ್ಟ್ರೀಯ ಏಜೆನ್ಸಿಗಳಿಗೆ ವಾರ್ಷಿಕವಾಗಿ ಪಾವತಿಸುವ ಬಡ್ಡಿ, ಮರುಪಾವತಿಸುತ್ತಿರುವ ಸಾಲದ ಮೊತ್ತ ಮತ್ತು ಇತರ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ದರ ನಿಗದಿ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೇತನ ಹೆಚ್ಚಳ ಮತ್ತು ನಿರ್ವಹಣಾ ವೆಚ್ಚದ ಹೆಚ್ಚಳದ ಬಗ್ಗೆಯೂ ನಾವು ಗಮನ ಹರಿಸಬೇಕಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಮೆಟ್ರೊ ರೈಲು ದರ ನಿಗದಿ ಸಮಿತಿ’ಗೆ ಅಕ್ಟೋಬರ್ 21 ರೊಳಗೆ ಸಲಹೆಗಳನ್ನು ನೀಡುವಂತೆ ನಾಗರಿಕರನ್ನು ಕೋರಿದೆ. ಸಾರ್ವಜನಿಕರು ತಮ್ಮ ಸಲಹೆಗಳನ್ನು ಇಮೇಲ್ ಮೂಲಕ ffc@bmrc.co.in ಗೆ ಕಳುಹಿಸಬಹುದು ಅಥವಾ ಬಿಎಂಆರ್‌ಸಿಎಲ್ ಕೇಂದ್ರ ಕಚೇರಿಗೆ ಅಂಚೆ ಮೂಲಕ ಕಳುಹಿಸಬಹುದು ಎಂದು ಹೇಳಿದೆ.