ಬೆಂಗಳೂರು: ಮೂರು ವರ್ಷದ ಹಿಂದೆ ಸತ್ತು ಹೋಗಿದ್ದಾಳೆ ಎಂದು ನಂಬಿಸಿ ಪ್ರಿಯಕರನ ಜತೆಗೆ ಪರಾರಿಯಾಗಿದ್ದ 30 ವರ್ಷದ ಮಹಿಳೆಯನ್ನು ಫೇಸ್ ಬುಕ್ ಪತ್ತೆ ಮಾಡಿಕೊಟ್ಟಿದೆ.
ಇಂತಹದ್ದೊಂದು ಕುತೂಹಲಕಾರಿ ಘಟನೆ, ಮಹಾರಾಷ್ಟ್ರದ ಗೋಂಡಾದಲ್ಲಿ ನಡೆದಿದೆ. 30 ವರ್ಷದ ಕವಿತಾ ಎಂಬ ಮಹಿಳೆ 2021ರಲ್ಲಿ ಕಾಣೆಯಾಗಿದ್ದು, 3 ವರ್ಷದ ಬಳಿಕ ಆಕೆ ಲಕ್ನೋದಲ್ಲಿ ಪತ್ತೆಯಾಗಿದ್ದಾಳೆ. ಆಕೆ ಲೋಂಡಾದಲ್ಲಿ ನೆರೆಮನೆ ವಾಸಿಯಾಗಿದ್ದ ಸತ್ಯನಾರಾಯಣ ಗುಪ್ತಾ ಎಂಬಾತನ ಜತೆಗಿದ್ದಳು ಎನ್ನಲಾಗಿದೆ.
ಕವಿತಾ ದೇವಿ, ಲೋಂಡಾದ ದುವಾ ಬಜಾರ್ ನ ವಿನಯ್ ಕುಮಾರ್ ಎಂಬಾತನನ್ನು ಡಿಸೆಂಬರ್ 17, 2017 ರಲ್ಲಿ ವಿವಾಹವಾಗಿದ್ದಳು. ನಾಲ್ಕು ವರ್ಷಗಳ ಕಾಲ ಚೆನ್ಮಾಗಿಯೇ ಸಂಸಾರ ಮಾಡಿಕೊಂಡಿದ್ದ ಆಕೆ, ಮೇ 5, 2021 ರಲ್ಲಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು.
ವಿನಯ್ ಕುಮಾರ್ ಆಕೆಯ ಕುಟುಂಬಸ್ಥರಿಗೆ ವಿಷಯ ತಿಳಿಸಿ, 26, ಮೇ 2021 ರಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲು ಮಾಡಿದ್ದರು. ಈ ನಡುವೆಯೇ ಕವಿತಾ ದೇವಿ ಕುಟುಂಬಸ್ಥರು, ಪತಿ ವಿನಯ್ ಕುಮಾರ್ ಹಾಗೂ ಆತನ ಸಹೋದರರ ಮೇಲೆ ವರದಕ್ಷಿಣೆ ಕಿರುಕುಳ ಹಾಗೂ ಮಗಳ ಕೊಲೆ ಮಾಡಿರುವ ಕುರಿತು ದೂರು ದಾಖಲಿಸಿದ್ದರು.
ಈ ನಡುವೆ ಪತಿ ವಿನಯ್ ಕುಮಾರ್ ಸಹ ಕವಿತಾ ದೇವಿ ಕುಟುಂಬಸ್ಥರ ಮೇಲೆ ತನ್ನ ಪತ್ನಿಯನ್ನು ಕಿಡ್ನಾಪ್ ಮಾಡಿರುವ ಕುರಿತು ದೂರು ನೀಡಿದ್ದು, ತನಿಖೆ ನಡೆಸಿದ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಹೀಗಾಗಿ, ಎರಡು ಪ್ರಕರಣಗಳಲ್ಲಿ ದೂರುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಪೊಲೀಸರಿಗೆ ಸೂಕ್ತ ತನಿಖೆ ನಡೆಸುವಂತೆ ಸೂಚನೆ ನೀಡಿದ ಬೆನ್ನಲ್ಲೇ, ಲೋಂಡಾ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ನೇತೃತ್ವದಲ್ಲಿ ಪತ್ತೆ ಕಾರ್ಯ ನಡೆದಿತ್ತು. ಈ ಕಾರ್ಯಾಚರಣೆ ವೇಳೆ ಆಕೆ ತನ್ನ ನೆರೆಮನೆಯಲ್ಲಿದ್ದ ಸತ್ಯನಾರಾಯಣ ಗುಪ್ತಾ ಜತೆಗೆ ಲಕ್ನೋದಲ್ಲಿ ಪತ್ತೆಯಾಗಿದ್ದಾಳೆ.
ಸುಳಿವು ನೀಡಿದ ಫೇಸ್ ಬುಕ್ !: ಪೊಲೀಸರಿಗೆ ತಲೆ ನೋವಾಗಿದ್ದ ಪ್ರಕರಣದಲ್ಲಿ ಪೇಸ್ ಬುಕ್ ಮಹತ್ವದ ಸುಳಿವು ನೀಡಿದೆ. ಕವಿತಾ ದೇವಿ ಬೇರೊಂದು ಹೆಸರಿನಲ್ಲಿ ಫೇಸ್ ಬುಕ್ ಅಕೌಂಟ್ ಹೊಂದಿದ್ದು, ಪೊಲೀಸರು ಆ ಅಕೌಂಟ್ ನ ಜಾಡು ಹಿಡಿದು ಹೊರಟಿದ್ದಾರೆ. ಫೇಸ್ ಅಕೌಂಟ್ ಆಧಾರದಲ್ಲಿ ಆಕೆ ಲಕ್ನೋದ ಡಾಲಿಗಂಜ್ ನಲ್ಲಿರುವುದು ಗೊತ್ತಾಗಿದೆ. ಪೊಲೀಸರು ತೆರಳಿ ಪರಿಶೀಲನೆ ನಡೆಸಿದಾಗ ಆಕೆ ಮೂರು ವರ್ಷದಿಂದ ಸತ್ಯನಾರಾಯಣ ಗುಪ್ತಾ ಜತೆಗಿರುವುದು ಗೊತ್ತಾಗಿದೆ.
ಲವ್ವಿಡವ್ವಿಗೆ ಮರುಳಾಗಿ ಪರಾರಿ: ಗೋಂಡಾದ ಗಂಡನ ಮನೆಯಲ್ಲಿದ್ದಾಗಲೇ ಕವಿತಾ ದೇವಿ ತನ್ನ ಪಕ್ಕದ ಮನೆಯ ಸತ್ಯನಾರಾಯಣ ಗುಪ್ತಾ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಹೀಗಾಗಿಯೇ ಆತನ ಜತೆಗೆ ಲಕ್ನೋಗೆ ಪರಾರಿಯಾಗಿದ್ದಳು. ಇದರ ಅರಿವಿಲ್ಲದ ಗಂಡ ಮತ್ತು ಆಕೆಯ ಪೋಷಕರು ಪರಸ್ಪರ ದೂರು ದಾಖಲಿಸಿ ಕಾನೂನು ಹೋರಾಟ ನಡೆಸಿದ್ದರು. ಆಕೆಯ ಕುಟುಂಬಸ್ಥರು ಗಂಡನೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿ, ಹೈಕೋರ್ಟ್ ಮೆಟ್ಟಿಲೇರಿದ್ದರು.
ಗಂಡನನ್ನು ಒಲ್ಲೆ ಎನ್ನುತ್ತಿರುವ ಕವಿತಾ ದೇವಿ: ಇದೀಗ ಲಕ್ನೋದ ಪ್ರಿಯಕರನ ಮನೆಯಿಂದ ಆಕೆಯನ್ನು ಕರೆತಂದಿರುವ ಪೊಲೀಸರ ಮುಂದೆ ಕವಿತಾ ದೇವಿ ತಾನು ತನ್ನ ಗಂಡನ ಮನೆಗೆ ಹೋಗಲಾರೆ ಎನ್ನುತ್ತಿದ್ದಾಳೆ. ಜತೆಗೆ ತನ್ನ ಕುಟುಂಬಸ್ಥರನ್ನು ಭೇಟಿಯಾಗುವುದಿಲ್ಲ ಎಂದು ಹಠ ಹಿಡಿದಿದ್ದಾಳೆ ಎನ್ನಲಾಗಿದೆ. ಸಧ್ಯ ಕವಿತಾ ದೇವಿ ಮತ್ತು ಪ್ರಿಯಕರ ಪೊಲೀಸ್ ಕಸ್ಟಡಿಯಲ್ಲಿಯೇ ಇದ್ದಾರೆ.