ಅಪರಾಧ ಸುದ್ದಿ

ಮೇಲ್ಜಾತಿಯವರ ಮುಂದೆ ಚೇರ್ ನಲ್ಲಿ ಕುಳಿತ ಕಾರಣಕ್ಕೆ ಪೊಲೀಸರಿಂದಲೇ ಥಳಿತ: ದಲಿತ ವ್ಯಕ್ತಿಯ ಆತ್ಮಹತ್ಯೆ

Share It

ಆಗ್ರಾ: ರಾಮ್ ಲೀಲಾ ಕಾರ್ಯಕ್ರಮದಲ್ಲಿ ಮೇಲ್ಜಾತಿಯವರ ಮುಂದೆ ಚೇರ್ ನಲ್ಲಿ ಕುಳಿತ ಎಂಬ ಕಾರಣಕ್ಕೆ ದಲಿತ ವ್ಯಕ್ತಿಯ ಮೇಲೆ ಪೊಲೀಸರಿಂದಲೇ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವಮಾನ ತಾಳಲಾರದೆ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕಾಸರ್ಗಂಜ್ ಜಿಲ್ಲೆಯ ಸಲಾಮ್ ಪುರ್ ವಿವಿ ಗ್ರಾಮದಲ್ಲಿ ನಡೆದಿದ್ದ ರಾಮ್ ಲೀಲಾ ಕಾರ್ಯಕ್ರಮದಲ್ಲಿ ಖಾಲಿಯಿದ್ದ ಚೇರ್ ನಲ್ಲಿ ಬಂದು 48 ವರ್ಷದ ದಲಿತ ವ್ಯಕ್ತಿ ಕುಳಿತುಕೊಂಡಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾರ್ಯಕ್ರಮದ ಆಯೋಜಕರು, ಸ್ಥಳದಲ್ಲಿ ಇದ್ದ ಪೊಲೀಸರಿಗೆ ಮಾಹಿತಿ ನೀಡಿ, ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಮೇಲ್ವರ್ಗದವರ ಒತ್ತಡಕ್ಕೆ ಮಣಿದ ಪೊಲೀಸರು, ರಮೇಶ್ ಚಾಂದ್ ಎಂಬ ವ್ಯಕ್ತಿಯನ್ನು, ಮನಸೋಯಿಚ್ಛೆ ಥಳಿಸಿದ್ದರು. ಪೊಲೀಸರು ನೀಡಿದ ಹೊಡೆತಕ್ಕೆ ರಮೇಶ್, ಗಾಯಗೊಂಡಿದ್ದರು. ಮನೆಗೆ ಬಂದು ಪತ್ನಿಯೊಡನೆ ತನಗಾದ ಅವಮಾನ ಮತ್ತು ನೋವಿನ ಬಗ್ಗೆ ಹೇಳಿಕೊಂಡಿದ್ದರು.

ರಾತ್ರಿ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ ರಮೇಶ್, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ದಲಿತ ಸಂಘಟನೆಗಳು ಮತ್ತು ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ರಮೇಶ್ ಚಾಂದ್ ಪತ್ನಿ ರಾಮ್ ರಾಠಿ ದೂರು ನೀಡಿದ್ದು, ರಾಮ್ ಲೀಲಾ ಕಾರ್ಯಕ್ರಮದ ಆಯೋಜನರ ಒತ್ತಡಕ್ಕೆ ಮಣಿದು ಪೊಲೀಸರು ನನ್ನ ಪತಿಗೆ ಅವಮಾನಿಸಿ, ಹಲ್ಲೆ ಮಾಡಿದ್ದಾರೆ. ಇದರಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಸಾವಿಗೆ ನ್ಯಾಯ ಕೊಡಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ರಮೇಶ್ ಚಾಂದ್ ಗೆ ಇಬ್ಬರು ಹೆಣ್ಣುಮಕ್ಕಳು ಸೇರಿ ನಾಲ್ವರು ಸಣ್ಣಸಣ್ಣ ಮಕ್ಕಳಿದ್ದು, ಅವರ ಪೋಷಣೆಗೆ ಹೊಣೆ ಯಾರು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ. ಪೊಲೀಸರ ವಿರುದ್ಧ ಮತ್ತು ಕಾರ್ಯಕ್ರಮದ ಆಯೋಜನರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ರಮೇಶ್ ಚಾಂದ್ ಮೇಲೆ ಹಲ್ಲೆ ನಡೆಸಿದ ಕಾನ್ಸ್ ಟೇಬಲ್ ಬಹದ್ದೂರ್ ಮತ್ತು ವಿಕ್ರಮ್ ಚೌಧರಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕುಟುಂಬಸ್ಥರು ಪಟ್ಟುಹಿಡಿದು ಸರೂನ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ರಮೇಶ್ ಚಾಂದ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದು, ಸೂಕ್ತ ಕ್ರಮದ ಭರವಸೆ ನೀಡಿ ಕುಟುಂಬಸ್ಥರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.


Share It

You cannot copy content of this page