ಮಡಿಕೇರಿ: ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು, ಭಾಗಮಂಡಲದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಸ್ಥಾನದಲ್ಲಿ ಪ್ರತಿ ವರ್ಷದ ರೂಢಿ ಸಂಪ್ರದಾಯದಂತೆ ಅ. 17 ರಂದು “ಶ್ರೀ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ” ಜಾತ್ರೆ ನಡೆಯಲಿದೆ.
ಕಳೆದ ವರ್ಷದಿಂದ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅನುದಾನ ನೀಡಲಾಗುತ್ತಿದೆ. ಸದರಿ ಜಾತ್ರಾ ಮಹೋತ್ಸವಕ್ಕೆ ಈ ಹಿಂದೆ ಎಂದೂ ಕೂಡ ಮುಜರಾಯಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿರುವುದಿಲ್ಲ.
ಆದರ, ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಹಾಗೂ ವಿರಾಜ್ ಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ತಲಕಾವೇರಿ ಜಾತ್ರೆಗೆ ಹಣ ಬಿಡುಗಡೆ ಮಾಡಿ ವ್ಯವಸ್ಥಿತ ಜಾತ್ರೆ ನಡೆಸಲು ಹಾಗೂ ಆಗಮಿಸುವ ಭಕ್ತಾಧಿಗಳಿಗೆ ಸಮಗ್ರ ಸೌಲಭ್ಯ ಕಲ್ಪಿಸಲು ಸಾರಿಗೆ ಹಾಗೂ ಮುಜರಾಯಿ ಸಚಿವರಲ್ಲಿ ಮನವಿ ಮಾಡಿದ್ದರು.
ಅದರಂತೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸಕಾರಾತ್ಮಕವಾಗಿ ಪರಿಗಣಿಸಿ, ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಅನುಕೂಲವಾಗುವಂತೆ 75.00 ಲಕ್ಷ ರು. ಹಣ ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷ ಕೂಡ ಸದರಿ ಜಾತ್ರಾ ಮಹೋತ್ಸವಕ್ಕೆ ರೂ.80 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು.