ಪಾಂಡವಪುರ: ಸತತ 15 ವರ್ಷದಿಂದ ಲಾಟರಿ ಖರೀದಿ ಮಾಡಿ ಲಾಸ್ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಕೊನೆಗೂ ಸತತ ಪ್ರಯತ್ನದ ನಂತರ 25 ಕೋಟಿ ಬಂಪರ್ ತನ್ನದಾಗಿಸಿಕೊಂಡಿದ್ದಾನೆ.
ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಅಲ್ತಾಫ್ ಎಂಬುವವರೇ ಇದೀಗ ಕೋಟ್ಯಾಧೀಶ್ವರನಾದ ವ್ಯಕ್ತಿ. ಇವರು ಖರೀದಿ ಮಾಡಿದ್ದ ಕೇರಳ ಸರಕಾರದ ಓಣಂ ಲಾಟರಿಯಲ್ಲಿ 25 ಕೋಟಿ ಬಂಪರ್ ಬಹುಮಾನ ಬಂದಿದೆ. ಇದು ಅಲ್ತಾಫ್ ಕುಟುಂಬದ ಸಂತಸಕ್ಕೆ ಕಾರಣವಾಗಿದೆ.
ಕೇರಳದ ಕಲ್ಪಟ್ಟದಲ್ಲಿ ಅಲ್ತಾಫ್ ಸ್ನೇಹಿತರಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಸ್ನೇಹಿತನನ್ನು ನೋಡಲು ಹೋಗಿದ್ದಾಗ 500 ರು. ಕೊಟ್ಟು ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇಂದು ಲಾಟರಿ ಬಹುಮಾನ ಘೋಷಣೆಯಾಗಿದ್ದು, ಅಲ್ತಾಫ್ ಖರೀದಿ ಮಾಡಿದ್ದ ಟಿಕೆಟ್ 25 ಕೋಟಿ ರು. ಗೆದ್ದಿದೆ.
ಕೇರಳ ಸರಕಾರವೇ ಲಾಟರಿ ಮಾರಾಟವನ್ನು ಅಧಿಕೃತವಾಗಿ ನಡೆಸುತ್ತಿದೆ. 15 ವರ್ಷದಿಂದ ಲಾಟರಿ ಆಡುವ ಹವ್ಯಾಸ ಹೊಂದಿದ್ದರು. ಇದರಿಂದ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದರು. ಇದೀಗ ಕೇರಳ ಸರಕಾರ ಓಣಂ ಹಬ್ಬದ ಪ್ರಯುಕ್ತ ನಡೆಸುವ ಓಣಂ ಬಂಪರ್ ಲಾಟರಿಯ ವಿಜೇತರಾಗಿದ್ದಾರೆ.
ಮೊದಲಿಗೆ ಅಲ್ತಾಫ್ ಕುಟುಂಬಸ್ಥರಿಗೆ ಹೇಳಿದರೆ, ಯಾರೂ ನಂಬಲಿಲ್ಲ. ಅನಂತರ ವೆಬ್ ಸೈಟ್ ಮೂಲಕ ತೋರಿಸಿ ಖಚಿತಪಡಿಸಿದರು. ಅನಂತರ ಇಡೀ ಕುಟುಂಬದ ಸದಸ್ಯರು ಖುಷಿಯಿಂದ ಕುಣಿದಾಡಿದ್ದಾರೆ. ಇದೀಗ ಕೇರಳದ ಸ್ನೇಹಿತರಿಗೆ ವಿಷಯ ತಿಳಿಸಿ, ಹಣ ಪಡೆಯಲು ಕೇರಳಕ್ಕೆ ಅಲ್ತಾಫ್ ಪ್ರಯಾಣ ಬೆಳೆಸಿದ್ದಾರೆ.