ಬೆಂಗಳೂರು: ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಪಟ್ಟೆಗಾರಪಾಳ್ಯದ ನಿವಾಸಿಗಳಾದ ಪ್ರಕಾಶ್, ಪಾರಿಜಾತ ಎಂಬ ದಂಪತಿಗಳು ಬಂಧಿತರು. ಆದರೆ, ಇವರು ತಮ್ಮ ಕಂಪನಿಯ ರೀತಿಯಲ್ಲಿ ತಮ್ಮ ಮೂಲ ಹೆಸರನ್ನು ಬದಲಿಸಿಕೊಂಡು ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ರಾಕೇಶ್ ಮತ್ತು ಪೂಜಾ ಎಂಬುದು ಇವರ ಮೂಲ ಹೆಸರು ಎಂದು ತಿಳದುಬಂದಿದೆ.
ಮದುವೆ ಈವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ತಮಿಳುನಾಡಿಗೆ ಕರೆದೊಯ್ದು ರೆಸಾರ್ಟ್ ನಲ್ಲಿ ಯುವತಿಯರನ್ನು ದಂಧೆಗೆ ತಳ್ಳುತ್ತಿದ್ದರು. ಈ ಕಾರ್ಯಕ್ಕೆ ಉತ್ತರ ಕರ್ನಾಟಕದ ಹೆಣ್ಣುಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಉತ್ತರ ಕರ್ನಾಟಕದ ಹೆಣ್ಣುಮಕ್ಕಳನ್ನು ಕೆಲಸ ಕೊಡಿಸುವ ನೆಪದಲ್ಲಿ ಬೆಂಗಳೂರಿಗೆ ಕರೆತರುತ್ತಿದ್ದರು. ನಂತರ ಅವರನ್ನು ಈವೆಂಟ್ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ತಮಿಳುನಾಡಿಗೆ ಕರೆದೊಯ್ಯುತ್ತಿದ್ದರು. ಅಲ್ಲಿ ರೆಸಾರ್ಟ್ ಗಳಲ್ಲಿ ಶ್ರೀಮಂತ ವ್ಯಕ್ತಿಗಳಿಗೆ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.
ರೆಸಾರ್ಟ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡಿ, ಅಲ್ಲಿಗೆ ಬರುವ ಒಬ್ಬರಿಗೆ ತಲಾ 25 ರಿಂದ 50 ಸಾವಿರದವರೆಗೆ ನಿಗದಿ ಮಾಡಲಾಗುತ್ತಿತ್ತು. ಈ ಪಾರ್ಟಿಗೆ ಕರೆದೊಯ್ದು ಶ್ರೀಮಂತರ ಬಳಿಗೆ ಹೆಣ್ಣುಮಕ್ಕಳನ್ನು ದೂಡಲಾಗುತ್ತಿತ್ತು.
ಈ ಖಚಿತ ದೂರುಗಳ ಆಧಾರದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಜತೆಗೆ ಆರು ಜನ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡಿ, ಮುಂದಿನ ವಿಚಾರಣೆ ಕೈಗೊಳ್ಳಲಾಗಿದೆ.