ಅಪರಾಧ ಸುದ್ದಿ

ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು

Share It

ಹುಬ್ಬಳ್ಳಿ: ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಹಳೇ ಹುಬ್ಬಳ್ಳಿ ರೈಲ್ವೆ ಕ್ವಾಟ್ರಸ್ ಬಳಿ ನಡೆದಿದೆ.
ಸುದೀಪ ರಾಯಾಪುರ, ಕಿರಣ್​ ಕೊಲೆ ಮಾಡಿದ ಆರೋಪಿಗಳು.

ಶಿವರಾಜ ಕಮ್ಮಾರ ​(23) ಎಂಬಾತನನ್ನು ಆರೋಪಿಗಳು ಚಾಕುವಿನಿಂದ ಚುಚ್ಚಿ ಹಾಗೂ ರಾಡ್ ನಿಂದ ಶುಕ್ರವಾರ ಕೊಲೆ ಮಾಡಿದ್ದಾರೆ. ಶಿವರಾಜ ಕಮ್ಮಾರ ಮತ್ತು ಸುದೀಪ ರಾಯಾಪುರ ಇಬ್ಬರೂ ಸ್ನೇಹಿತರಾಗಿದ್ದು, ಶುಕ್ರವಾರ ಇಬ್ಬರು ಒಟ್ಟಿಗೆ ಮನೆಯಲ್ಲಿ ಹಬ್ಬ ಮಾಡಿದ್ದರು.

ಹಬ್ಬ ಆಚರಿಸಿದ ಬಳಿಕ ಶಿವರಾಜ ಕಮ್ಮಾರ ಹೊರಗಡೆ ಹೋಗಿದ್ದಾನೆ. ಆದರೆ ಆತನ ಗೆಳೆಯರಿಗೆ ಹಳೇ ದ್ವೇಷ, ಹಣದ ವ್ಯವಹಾರ ಇತ್ತೆಂಬ ಮಾಹಿತಿ ಸಿಕ್ಕಿದ್ದು ಈ ಹಿನ್ನೆಲೆಯಲ್ಲಿ ಕೊಲೆ‌ಮಾಡಲಾಗಿದೆ ಎನ್ನಲಾಗಿದೆ.
ಶಿವರಾಜ ಕಮ್ಮರ್​​ನನ್ನು​ ಹತ್ಯೆಗೈದ ಆರೋಪಿಗಳಾದ ಸುದೀಪ್, ಕಿರಣ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳು ಬೀಡು ಬಿಟ್ಟಿದ್ದ ಸ್ಥಳಕ್ಕೆ ಅಶೋಕನಗರ ಠಾಣೆಯ ಪೊಲೀಸರು ಸುದೀಪ್​ ಮತ್ತು ಕಿರಣ್​ನನ್ನು ಕರೆದೊಯ್ದಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದರು.

ಆಗ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ.

ಆರೇಳು ಜನರಿಂದ ಶಿವರಾಜ್​ನನ್ನು ಹತ್ಯೆ ಮಾಡಲಾಗಿದೆ. ಹಳೇ ದ್ವೇಷ, ಹಣದ ವ್ಯವಹಾರ ಇತ್ತೆಂಬ ಮಾಹಿತಿ ಸಿಕ್ಕಿದೆ. ಮೂವರು ಆರೋಪಿಗಳನ್ನು ರಾತ್ರಿ ವಶಕ್ಕೆ ಪಡೆದಿದ್ದೇವೆ. ಇಬ್ಬರು ಆರೋಪಿಗಳು ಉಳಿದವರ ಬಗ್ಗೆ ಹೇಳುತ್ತೇವೆ ಅಂದಿದ್ದರು.

ಹೀಗಾಗಿ, ಹಳೇ ಹುಬ್ಬಳ್ಳಿ ರೈಲ್ವೆ ಕ್ವಾಟ್ರಸ್ ಬಳಿ ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿ, ಪರಾರಿಯಾಗಲು ಮುಂದಾಗಿದ್ದರು ಎಂದು ಹ-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.


Share It

You cannot copy content of this page