ಆಗ್ರಾ: ಕಲ್ಯಾಣಮಂಟಪದ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಗೆ ಗುದ್ದಿ ನಾಲ್ವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಆಲಿಘಡ ಜಿಲ್ಲೆಯ ಜವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ2 ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ, ನಾಲ್ವರು ಯುವಕರು ಬೈಕ್ ನಲ್ಲಿ ಬಂದು ಟ್ರ್ಯಾಕ್ಟರ್ ಗೆ ಗುದ್ದಿದ್ದು, ಸ್ಥಳಕ್ಕೆ ಸ್ಥಳೀಯ ಪೊಲೀಸರು ಮತ್ತು ಅಂಬ್ಯುಲೆನ್ಸ್ ಆಗಮಿಸಿದ್ದು, ಜವಾಹರ್ ಲಾಲ್ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿತ್ತು. ಆದರೆ, ದಾರಿಯಲ್ಲಿ ಮೃತಪಟ್ಟಿರುವ ಕುರಿತು ವೈದ್ಯರು ದೃಢಪಡಿಸಿದ್ದಾರೆ.
ಮೃತಪಟ್ಟವರಲ್ಲಿ ವಿಕಾಸ್ ಶರ್ಮಾ ಮತ್ತು ಯಶ್ ಶರ್ಮಾ 11 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದಾರೆ. ಸುನೀಲ್ ಮೀನಾ 22 ಮತ್ತು ರವಿಕುಮಾರ್ ಸಿಂಗ್ 19 ವರ್ಷ ವಯಸ್ಸಿನವರಾಗಿದ್ದು, ಸುನೀಲ್ ಇತ್ತೀಚೆಗೆ ಬಿಎಸ್ಸಿ ಪೂರ್ಣಗೊಳಿಸಿದ್ದು, ರವಿಕುಮಾರ್ 12 ನೇ ತರಗತಿ ಪೂರ್ಣಗೊಳಿಸಿದ್ದ ಎನ್ನಲಾಗಿದೆ.
ಮೃತರೆಲ್ಲರೂ ಪರಸ್ಪರ ಪರಿಚಯವಿದ್ದವರಾಗಿದ್ದು, ರೈತ ಕುಟುಂಬದ ಯುವಕರಾಗಿದ್ದಾರೆ. ಘಟನೆಯಿಂದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ಹೆಲ್ಮೆಟ್ ಧರಿಸದೆ ಇರುವುದೇ ಸಾವಿಗೆ ಕಾರಣ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಸಿಮೆಂಟ್ ತುಂಬಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.