ಶಾರ್ಜಾ : ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಭಾನುವಾರ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭಾರತ ಕೇವಲ 9 ರನ್ ಗಳ ವಿರೋಚಿತ ಸೋಲು ಕಂಡಿದೆ.
ಯುಎಇ ದೇಶದ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ತಹ್ಲಿಯಾ ಮೆಕ್ ಗ್ರಾತ್ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಆದರೆ ಭಾರತದ ಮಹಿಳಾ ವೇಗಿ ರೇಣುಕಾ ಸಿಂಗ್ ಅವರ ಬೌಲಿಂಗ್ ದಾಳಿಗೆ ಆಫೀಸ್ ತಂಡದ ಇಬ್ಬರು ಬ್ಯಾಟರ್ ಗಳು ಸ್ಕೋರ್ 17 ರನ್ ಆಗುವಷ್ಟರಲ್ಲಿ ಔಟ್ ಆಗಿ ಪೆವಿಲಿಯನ್ ಸೇರಿದರು. ಆದರೆ ಓಪನರ್ ಗ್ರೇಸ್ ಹ್ಯಾರಿಸ್ 40 ರನ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ನಾಯಕಿ ತಹ್ಲಿಯಾ ಮೆಕ್ ಗ್ರಾತ್ 32 ರನ್, ಎಲ್ಲಿಸ್ ಪೆರ್ರಿ 32 ರನ್ ಗಳ ಅಮೂಲ್ಯ ಬ್ಯಾಟಿಂಗ್ ನಿಂದ ಆಸ್ಟ್ರೇಲಿಯಾ ನಿಗದಿತ.20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 151 ರನ್ ಗಳ ಸಾಧಾರಣ ಸ್ಕೋರ್ ಗಳಿಸಿತು.
ಭಾರತದ ಪರ ಬೌಲಿಂಗ್ ನಲ್ಲಿ ವೇಗಿ ರೇಣುಕಾ ಸಿಂಗ್ ಮತ್ತು ಸ್ಪಿನ್ನರ್ ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದರು. ಬಳಿಕ ಚೇಸಿಂಗ್ ಮಾಡಿದ ಭಾರತದ ಮಹಿಳೆಯರು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಸುಸ್ತು ಹೊಡೆದು 9 ರನ್ ಗಳಿಂದ ಸೋತು ಸೆಮಿಫೈನಲ್ಸ್ ರೇಸ್ ನಿಂದ ಹೊರಬಿದ್ದರು.
ಭಾರತದ ಓಪನರ್ ಶೆಫಾಲಿ ವರ್ಮಾ 20 ರನ್ (13 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದರೆ ಕಡೆಯಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್ ಕೆಚ್ಚೆದೆಯ ಆಟವಾಡಿ ಔಟಾಗದೆ 54 ರನ್(47 ಎಸೆತ) ಹಾಗೂ ಆಲ್ ರೌಂಡರ್ ದೀಪ್ತಿ ಶರ್ಮಾ 29 ರನ್ (25 ಎಸೆತ) ಗಳಿಸಿದರೂ ಕಡೆಯಲ್ಲಿ ಇತರೆ ಬಾಲಂಗೋಚಿ ಮಹಿಳಾ ಬ್ಯಾಟರ್ ಗಳು ಸಾಥ್ ನೀಡದ ಕಾರಣ ಭಾರತದ ಮಹಿಳಾ ತಂಡ 152 ರನ್ ಗುರಿ ತಲುಪಲಾಗದೆ ಸೋಲಿಗೆ ಶರಣಾಯಿತು.
ಭಾರತದ ಮಹಿಳೆಯರು ಕೊನೆಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಉತ್ತಮ ರನ್ ರೇಟ್ ಆಧಾರದ ಮೇಲೆ ಗೆದ್ದಿದ್ದರೆ ಸೆಮಿಫೈನಲ್ಸ್ ನಲ್ಲಿ ಆಡುವ ಅವಕಾಶ ಇತ್ತು. ಆದರೆ ಭಾರತದ ಮಹಿಳೆಯರು ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಕನಿಷ್ಟ ಗೆಲುವು ಸಾಧಿಸದೆ ಸೋಲಿಗೆ ಶರಣಾದ ಕಾರಣ ನ್ಯೂಜಿಲೆಂಡ್ ತಂಡ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದರೆ ಸಾಕು ಸೆಮಿಫೈನಲ್ಸ್ ಪ್ರವೇಶಿಸಲಿದೆ.
ಒಂದು ವೇಳೆ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ವಿರುದ್ಧ ಸೋತರೆ ಮಾತ್ರ ಭಾರತ ಸೆಮಿಫೈನಲ್ಸ್ ನಲ್ಲಿ ಆಡುವ ಅವಕಾಶ ಪಡೆಯಲಿದೆ. ಸದ್ಯ ಭಾರತದ ಮಹಿಳಾ ತಂಡ ನ್ಯೂಜಿಲೆಂಡ್ ತಂಡಕ್ಕಿಂತ ಉತ್ತಮ ರನ್ ರೇಟ್ ಹೊಂದಿದೆ. ಆದರೆ ದುರ್ಬಲ ಪಾಕಿಸ್ತಾನದ ಮಹಿಳಾ ತಂಡ ಪ್ರಬಲ ನ್ಯೂಜಿಲೆಂಡ್ ವಿರುದ್ಧ ಗೆಲುವು ಪಡೆಯುವಷ್ಟು ಸಮರ್ಥ ತಂಡವಲ್ಲ.
ಹೀಗಾಗಿ ಶಾರ್ಜಾದ ಸೋಲಿನೊಂದಿಗೆ ಭಾರತದ ಮಹಿಳೆಯರು ಗಂಟುಮೂಟೆ ಕಟ್ಟಿ ಸ್ವದೇಶಕ್ಕೆ ಹಿಂದಿರುಗಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾದ ಎಡಗೈ ಬೌಲರ್ ಸೋಫಿ ಮೊಲಿನೆಕ್ಸ್ ಕಡೆಯಲ್ಲಿ ಭಾರತದ ಎರಡು ವಿಕೆಟ್ ಪಡೆದು ಪಂದ್ಯದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದರು.