ಅಪರಾಧ ಸುದ್ದಿ

ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚನೆ: ಕಿಂಗ್ ಪಿನ್ ತಿಪ್ಪೇಸ್ವಾಮಿಯ ಬಂಧನ

Share It

ಗದಗ: ಸರ್ಕಾರಿ ನೌಕರಿ ಕೊಡಿಸುವುದಾಗಿ ಹಲವರಿಂದ ಕೋಟ್ಯಾಂತರ ರೂಪಾಯಿ ಪಡೆದು ವಂಚನೆ ಮಾಡಿದ್ದ ಗ್ಯಾಂಗ್ ನ ಕಿಂಗ್ ಪಿನ್ ತಿಪ್ಪೇಸ್ವಾಮಿಯನ್ನು ಬಂಧಿಸಲಾಗಿದೆ.

ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಸುಮಾರು 39 ವಿದ್ಯಾವಂತ ಯುವಕರಿಗೆ ಕೋರ್ಟ್ ಹಾಗೂ ಸರ್ಕಾರಿ ಕಚೇರಿಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿ ಈ ಖತರ್ನಾಕ್ ಗ್ಯಾಂಗ್ ಮೋಸ ಮಾಡಿದೆ.

ಸರ್ಕಾರಿ ನೌಕರಿ ಆಸೆಗೆ ಬಿದ್ದು 3 ಕೋಟಿ 30 ಲಕ್ಷ ರೂಪಾಯಿಯನ್ನು ಜನರಿಂದ ವಸೂಲಿ ಮಾಡಿದ್ದರು.
ಬಡವರನ್ನು ವಂಚಿಸಿದ ಹಣದಲ್ಲಿ ಐಶಾರಾಮಿ ಕಾರುಗಳನ್ನು ಖರೀದಿ ಮಾಡಿ ಮಜಾ ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ರಾಜ್ಯದ ನಾನಾ ಕೋರ್ಟ್ ಗಳಲ್ಲಿ, ಸಿಪಾಯಿ ಹಾಗೂ ಪ್ರೋಸೆಸ್ ಸರ್ವರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಿದ್ದಾರೆ. ಕೆಲವರು ಜಮೀನು, ಮನೆ ಮಾರಿ ಲಕ್ಷ ಲಕ್ಷ ಹಣ ನೀಡಿದ್ದಾರೆ. ಗ್ಯಾಂಗ್ ನ ಮೋಸ ಗೊತ್ತಾದ ಜನರು ಗದಗ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಪ್ರಕರಣದ ತ‌‌ನಿಖೆ ನಡೆಸುತ್ತಿದ್ದಾರೆ. ಮೊದಲು ಮಧ್ಯವರ್ತಿ ನಾಗಭೂಷಣ ಹಿರೇಮಠ ದೂರು ನೀಡಿದ ಮೇಲೆ, ಅವರ ಸಂಬಂಧಿಯಾದ ಅನ್ನದಾನೇಶ್ವರ ಹಿರೇಮಠ, ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾಗ ಇದರ ಕಿಂಗ್ ಯಾರು ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ಅರೆಸ್ಟ್ ಆಗಿರುವ ತಿಪ್ಪೇಸ್ವಾಮಿ, ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ. ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ತಿಪ್ಪೇಸ್ವಾಮಿ ಜನರಿಂದ ಮೋಸ ಮಾಡಿ ಪಡೆದ ಹಣವನ್ನು ಚುನಾವಣೆಗೆ ಬಳಕೆ ಮಾಡಿದ್ದಾನೆ. ಮುಂಡರಗಿ ಪಟ್ಟಣದ ಅನ್ನದಾನೇಶ್ವರ ಹಿರೇಮಠ ದಂಪತಿ ಸೇರಿದಂತೆ 10 ಜನರ ವಿರುದ್ಧ ದೂರು ದಾಖಲಾಗಿದೆ.

ಸದ್ಯ ಆರು ಜನ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ತಿಪ್ಪೇಸ್ವಾಮಿ ಹಾಗೂ ಡಾ.ಜಿ. ಎನ್. ವೆಂಕಟರೆಡ್ಡಿ ಅವರನ್ನು ಸದ್ಯ ಅರೆಸ್ಟ್ ಮಾಡಿ ಅವರಿಂದ ಎರಡು ಐಶಾರಾಮಿ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಗದಗ ಎಸ್ಪಿ ಬಿ.ಎಸ್. ನೇಮಗೌಡ ಅವರು ತಿಳಿಸಿದ್ದಾರೆ.


Share It

You cannot copy content of this page