ಸುದ್ದಿ

ನವಲಗುಂದ: ತುಪ್ಪರಿಹಳ್ಳ ಪ್ರವಾಹದಿಂದ ಹಾನಿಯಾದ ಪ್ರದೇಶಗಳಿಗೆ ಶಾಸಕ ಎನ್.ಎಚ್.ಕೋನರೆಡ್ಡಿ ಭೇಟಿ

Share It


ಶಿರಕೋಳ, ಬಳ್ಳೂರ ಗ್ರಾಮಗಳ ಹತ್ತಿರ ಈ ವರ್ಷವೇ ಸೇತುವೆ ನಿರ್ಮಾಣ : ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ
ನವಲಗುಂದ : ತುಪ್ಪರಿಹಳ್ಳ ಆಜು ಬಾಜು ಇರುವ ಗ್ರಾಮಗಳ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ತಪ್ಪಿಸಲು ಈಗಾಗಲೇ ಹಳ್ಳವನ್ನು ಅಗಲೀಕರಣಗೊಳಿಸಿ ನೀರು ಸುಗಮವಾಗಿ ಹರಿದುಹೋಗುವ ರೀತಿ ಕಾಮಗಾರಿ ಪ್ರಾರಂಭಿಸಿದ್ದು ಬಾಕಿ ಉಳಿದ ಕಾಮಗಾರಿಗೆ ಕೂಡಲೇ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಲಾಗುವದು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.

ಅವರು ಇಂದು ನವಲಗುಂದ ನಗರದ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಸಂಗಮದಲ್ಲಿ ರೈತರ ಬೆಳೆಗಳು ಹಾಳಾಗಿದ್ದನ್ನು ವೀಕ್ಷಿಸಿ ನಂತರ ನವಲಗುಂದ ತಾಲ್ಲೂಕಿನ ಶಿರೂರ, ಆಹೆಟ್ಟಿ, ಗುಮ್ಮಗೋಳ, ಮೊರಬ, ಹಣಸಿ, ಶಿರಕೋಳ, ಜಾವೂರ ಹಾಗೂ ಬಳ್ಳೂರ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಶಿರೂರ-ಇನಾಮಹೊಂಗಲ ಮಧ್ಯೆ ಇರುವ ಕಲ್ಲಹಳ್ಳ, ಶಿರೂರ ಪ್ಲಾಟಿನ ಹತ್ತಿರ ಇರುವ ಕುಂಟಿ ಹಳ್ಳ, ಗುಮ್ಮಗೋಳ ಉಗರಗೋಳ ಹತ್ತಿರ ಇರುವ ಮಲ್ಲಹಳ್ಳ, ರಂಜಿಕನಹಳ್ಳ ಹಾಗೂ ತುಪ್ಪರಿಹಳ್ಳಗಳನ್ನು ಪರಿಶೀಲನೆ ಮಾಡಿ ಮಾತನಾಡಿದ ಅವರು ಪ್ರತಿ ವರ್ಷ ಮಳೆಗಾಲದಲ್ಲಿ ತುಪ್ಪರಿಹಳ್ಳ ಹಾಗೂ ಇತರೇ ಉಪ ಹಳ್ಳಗಳಲ್ಲಿ ಕಂಟಿ ಬೆಳೆದು ಕೆಲವು ಕಡೆ ಮಣ್ಣಿನ ಒಟ್ಟು ಬಿಟ್ಟು ಗುಡ್ಡೆಯಾಗಿ ನೀರು ಹರಿವು ಕಡಿಮೆಯಾಗಿ ಒಂದು ಹಳ್ಳದ ಬದಲಾಗಿ ಕೆಲವು ಕಡೆ ಮೂರು ಹಳ್ಳಗಳಾಗಿ ರೈತರ ಜಮೀನುಗಳು ಹಾಳಾಗುತ್ತಾ ಬಂದಿವೆ. ಗುಮ್ಮಗೋಳ ಹಾಗೂ ಶಿರೂರ, ಆಯಟ್ಟಿ ಹತ್ತಿರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಅಲ್ಲದೇ ಗ್ರಾಮಗಳಿಗೆ ನೀರು ನುಗ್ಗಿ ಮನೆಗಳು ಹಾಗೂ ರಸ್ತೆಗಳು ಹಾಳಾಗುತ್ತಿವೆ. ತುಪ್ಪರಿಹಳ್ಳ 2ನೇ ಹಂತದ ಅಂದಾಜು 150 ಕೋಟಿ ಅನುದಾನದಲ್ಲಿ ಅಲ್ಲಲ್ಲಿ ತಡೆಗೋಡೆ, ಸಿಡಿ ಹಾಗೂ ಉಪಹಳ್ಳಗಳ ಅಗಲೀಕರಣ ಕಾಮಗಾರಿಗೆ ಸರ್ಕಾರಕ್ಕೆ ಒತ್ತಡ ಹೇರಿ ಕಾಮಗಾರಿ ಜಾರಿಗೊಳಿಸಲು ನಿರ್ಣಯಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದಿಂದ ಬೆಳೆ ಪರಿಹಾರ ಬಿಡುಗಡೆ ಮಾಡಲು ಪಕ್ಷಾತೀತವಾಗಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರಿಗೆ ಒತ್ತಾಯಿಸಿ ರೈತರಿಗೆ ಸಹಾಯ ಮಾಡಲು ಮನವಿ ಮಾಡುವುದಾಗಿ ಹೇಳಿದರು.

ಬೆಳೆ ಪರಿಹಾರ ಬಿಡುಗಡೆಯಾದ ತಕ್ಷಣ ರೈತರಿಗೆ ಪರಿಹಾರ ನೀಡಲಾಗುವದು. ಶಿರಕೋಳ-ಹಣಸಿ ರಸ್ತೆ ಸಂಚಾರಕ್ಕೆ ಸಂಪರ್ಕ ಕಳೆದುಕೊಂಡು ಬಸ್ ಸಂಚಾರ ಬಂದ ಆಗಿದ್ದು ಅದಕ್ಕೆ ತಕ್ಷಣ ಸ್ಪಂಧಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಬಳ್ಳೂರ-ತಿರ್ಲಾಪೂರ ರಸ್ತೆಯವರೆಗೆ ಸಂಚಾರ ಸ್ಥಗಿತಗೊಂಡಿದ್ದನ್ನು ದುರಸ್ಥಿ ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಶಿರಕೋಳ-ಹಣಸಿ ನಡುವೆ ಇರುವ ತುಪ್ಪರಿಹಳ್ಳಕ್ಕೆ ರೂ. 3.50 ಕೋಟಿ ಅನುದಾನದಲ್ಲಿ ಎತ್ತರದ ನೂತನ ಸೇತುವೆ ನಿರ್ಮಾಣ ಹಾಗೂ ಬಳ್ಳೂರ-ಜಾವೂರ ನಡುವೆ ಇರುವ ತುಪ್ಪರಿಹಳ್ಳಕ್ಕೆ ರೂ. 3.00 ಕೋಟಿ ಅನುದಾನದಲ್ಲಿ ಎತ್ತರದ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಮಳೆಗಾಲ ಮುಗಿದ ತಕ್ಷಣ ಭೂಮಿ ಪೂಜೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ಕೋನರಡ್ಡಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಕನೀನಿನಿ ಮುಖ್ಯ ಅಭಿಯಂತರರಾದ ವಾಸನದ, ಅಧೀಕ್ಷಕ ಅಭಿಯಂತರರಾದ ಮಲ್ಲಿಗವಾಡ, ಕಾರ್ಯನಿರ್ವಾಹಕ ಅಭಿಯಂತರಾದ ದೊಡ್ಡಮನಿ, ಬಿಸನಾಳ, ಎಇಇ ಜಾಲಗಾರ, ಮೋನಿ ಪಾಟೀಲ, ತಹಶೀಲ್ದಾರ ಸುಧೀರ ಸಾವಕಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಭಾಗ್ಯಶ್ರೀ ಜಾಗೀರದಾರ, ಸಹಾಯಕ ಕಾರ್ಯನಿರ್ವಾಹಕ ಅಭಯಂತರ ಎಸ್.ಎನ್. ಸಿದ್ದಾಪೂರ, ಎಂ.ಜಿ. ಶಿಂಧೆ, ಮುಖಂಡರಾದ ಮುರಗಯ್ಯಜ್ಜನವರು ವೀರಕ್ತಮಠ, ಎಂ.ಎಸ್. ರೋಣದ, ವೀರನಗೌಡ ಬಾಳನಗೌಡ್ರ, ನಾಗು ಪಟ್ಟಣದ, ರುದ್ರೇಶ ಹವಳದ, ಮಾಂತೇಶೌಡ ಬಾಳನಗೌಡ್ರ, ಪ್ರಕಾಶ, ರಾಜು ವಡ್ಡರ, ಶಣ್ಮುಖ ಜಾವೂರ, ಮೌಲಾಸಾಬ ನದಾಫ, ಬಸವರಾಜ ಹದ್ದಣ್ಣವರ, ಶ್ರೀನಿವಾಸ ಹೊಸಮನಿ, ಎಸ್.ವಿ. ಬಳಿಗೇರ, ಪರಮೇಶ ಹೊಸವಾಳ, ಪರಪ್ಪ ಗಾಣಿಗೇರ, ಬಸವರಾಜ ಬೋರಶೇಟ್ಟರ, ವಿಜಯ ಪೂಜಾರ, ಮಕ್ತುಮಸಾಬ ಬೀಬಣ್ಣವರ, ನಿಂಗಯ್ಯ ಪೂಜಾರ, ಹನಮಂತಗೌಡ ಪಾಟೀಲ, ತೋಪನಗೌಡ ಹುಡೇದ, ಚನ್ನಪ್ಪ ಗಾಣಿಗೇರ, ಬಾಬುಸಾಬ ನದಾಫ, ಶಿವಾನಂದ ಬಂಡಿವಾಡ, ಕಲ್ಲಪ್ಪ ಸಂಗಳದ, ಕಲ್ಮೇಶ ತಳವಾಯಿ, ಸೋಮಣ್ಣ ನಾಯ್ಕರ, ಬಾಬು ಮುಲ್ಲಣ್ಣವರ ಹಾಗೂ ಇತರರು ಉಪಸ್ಥಿರದ್ದರು.


Share It

You cannot copy content of this page