ಸುದ್ದಿ

ಮಮದಾಪುರ ಅರಣ್ಯಕ್ಕೆ ಸಿದ್ದೇಶ್ವರ ಸ್ವಾಮಿ ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಮರು ನಾಮಕರಣ

Share It

ವಿಜಯಪುರ: ಜಿಲ್ಲೆಯ ಮಮದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 1.494.38 ಎಕರೆ ಮೀಸಲು ಅರಣ್ಯ ಪ್ರದೇಶಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಸಿದ್ದೇಶ್ವರ ಸ್ವಾಮೀಜಿಯವರ 2ನೇ ಪುಣ್ಯತಿಥಿ ಅಂಗವಾಗಿ ಜನವರಿ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಲಿದ್ದಾರೆ ತಿಳಿಸಿದರು.

ಸಿದ್ದೇಶ್ವರ ಸ್ವಾಮೀಜಿಯವರ ಜೀವನ ಮತ್ತು ಕೊಡುಗೆಗಳನ್ನು ಜನರಿಗೆ ತಿಳಿಸಲು ವಿಜ್ಞಾನ ಕೇಂದ್ರ ಮತ್ತು ವಸ್ತುಸಂಗ್ರಹಾಲಯವನ್ನು ಸಹ ಸ್ಥಾಪಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೇ.5ರಷ್ಟು ಅರಣ್ಯ ಪ್ರದೇಶವಿದ್ದು, ವಿಜಯಪುರದಲ್ಲಿ ಶೇ.1ಕ್ಕಿಂತ ಕಡಿಮೆ ಇದೆ. ಪಾರಂಪರಿಕ ತಾಣ ಎಂದು ಘೋಷಣೆ ನಂತರ ಅರಣ್ಯ ಸಂರಕ್ಷಣೆಗೆ ಉತ್ತೇಜಿಸದಂತಾಗುತ್ತದೆ ಎಂದು ಸಚಿವರು ಹೇಳಿದರು.

ಅರಣ್ಯ ಭೂಮಿಯನ್ನು ಪಾರಂಪರಿಕ ತಾಣವೆಂದು ಘೋಷಿಸುವುದರಿಂದ ಸಸ್ಯ ಮತ್ತು ಪ್ರಾಣಿ ಸಂಕುಲದ ರಕ್ಷಣೆಗೆ ಹೆಚ್ಚಿನ ಗಮನ ಕೊಡಬಹುದು. ವಿಜಯಪುರದಲ್ಲಿ ಅರಣ್ಯ ಇಲಾಖೆಗೆ ಒಳಪಡುವ ಒಟ್ಟು ಜಮೀನು 2 ಸಾವಿರ ಹೆಕ್ಟೇರ್ ಭೂಮಿ ಇದೆ. ಈ ಪಾರಂಪರಿಕ ತಾಣದಲ್ಲಿ ಎರಡು ಕೆರೆಗಳಿದ್ದು, ಇವು ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿವೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದರು.

ಸಾಮಾನ್ಯವಾಗಿ ಪಾರಂಪರಿಕ ತಾಣಗಳು ಮತ್ತು ಸಂರಕ್ಷಣಾ ಮೀಸಲು ಪ್ರದೇಶಗಳೆಂದು ಬೆಂಗಳೂರು ಸುತ್ತಮುತ್ತ ಅಥವಾ ಪಶ್ಚಿಮ ಘಟ್ಟ ಪ್ರದೇಶಗಳು ಎಂದು ಘೋಷಿಸಲಾಗುತ್ತದೆ.

ಯಾವಾಗಲೂ ಬಯಲು ಸೀಮೆಯ ಪ್ರದೇಶಗಳಿಗೆ ಇಂತಹ ಟ್ಯಾಗ್ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಸಿದ್ದೇಶ್ವರ ಶ್ರೀಗಳ ಹೆಸರನ್ನು ಈ ಕಾನನ ಪ್ರದೇಶಕ್ಕೆ ಇಡುವುದರಿಂದ ಜನರಲ್ಲಿ ಪರಿಸರ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ ಎಂದು ತಿಳಿಸಿದರು.


Share It

You cannot copy content of this page