ಬೆಂಗಳೂರು: ಭವಾನಿ ರೇವಣ್ಣಗೆ ಜಾಮೀನು ನೀಡಿದ್ದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಎಸ್ಐಟಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಕೆ.ಆರ್.ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅವರನ್ನು ಬಂಧಿಸಲು ಎಸ್ಐಟಿ ಮುಂದಾಗಿತ್ತು. ಈ ವೇಳೆ ಭವಾನಿ ರೇವಣ್ಣ ತಮ್ಮನ್ನು ಬಂಧಿಸದಂತೆ ಹೈಕೋರ್ಟಿನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಹೈಕೋರ್ಟ್ ನೀಡಿದ ಜಾಮೀನು ರದ್ದುಗೊಳಿಸಬೇಕು, ಅವರು ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿರುವ ಕಾರಣದಿಂದ ಅವರನ್ನು ಬಂಧಿಸಿ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಎಸ್ಐಟಿ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದೆ.
ಸುಪ್ರಿಂ ಕೋರ್ಟ್ ತೀರ್ಮಾನದಿಂದ ಭವಾನಿ ರೇವಣ್ಣಗೆ ನಿರಾಳವಾಗಿದ್ದು, ಕುಟುಂಬದ ನಾಲ್ಕನೇ ವ್ಯಕ್ತಿ ಜೈಲುಪಾಲಾಗುವುದನ್ನು ತಪ್ಪಿಸಿಕೊಂಡಂತಾಗಿದೆ. ಭವಾನಿ ಪತಿ ರೇವಣ್ಣ ಅತ್ಯಾಚಾರ ಆರೋಪದಲ್ಲಿ ಬಂಧಿತರಾಗಿ ಜೈಲು ಸೇರಿದ್ದರು.
ಅವರ ಮೊದಲ ಪುತ್ರ ಪ್ರಜ್ವಲ್ ಅತ್ಯಾಚಾರ ಆರೋಪದಲ್ಲಿ ಈಗಲೂ ಜೈಲಿನಲ್ಲಿದ್ದಾರೆ. ಎರಡನೇ ಪುತ್ರ ಸೂರಜ್ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿ ಜಾಮೀನು ಪಡೆದುಕೊಂಡಿದ್ದಾರೆ.