ಮೈಸೂರು:ಮೂಡಾ ಅಕ್ರಮ ತನಿಖೆಗೆ ಇಡಿ ಎಂಟ್ರಿ ಕೊಟ್ಟಿದ್ದು, ಮೈಸೂರಿನ ಕಚೇರಿ ಮತ್ತು ಕೆಲವು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದೆ.
ಮೈಸೂರಿನ ಮೂಡಾ ಕಚೇರಿಗೆ ದಾಳಿ ನಡೆಸಿದ ಇಡಿ ಅಧಿಕಾರಿಗಳ ತಂಡ ದಾಖಲೆಗಳನ್ನು ಜಾಲಾಡಿದೆ. ಮೂಡಾದಲ್ಲಿ ನಡೆದಿರುವ ಹಗರಣದ ಕುರಿತು ಈಗಾಗಲೇ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಕೋಟ್ಯಂತರ ರು.ಹಗರಣ ನಡೆದಿರುವ ಹಿನ್ನೆಲೆಯಲ್ಲಿ ಇಡಿ ಪ್ರವೇಶ ಮಾಡಿದ್ದು, ಕುತೂಹಲ ಮೂಡಿಸಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಅವರ ಪತ್ನಿ ಹೆಸರಿನಲ್ಲಿದ್ದ 14 ನಿವೇಶನಗಳನ್ನು ವಾಪಸ್ ಮಾಡಲಾಗಿದೆ. ಏಕಾಏಕಿ ವಾಪಸ್ ಪಡೆದ ಕುರಿತು ಸಹ ಇಡಿ ಕಣ್ಣಿಟ್ಟಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಡಿ ದಾಳಿ ಮಹತ್ವ ಪಡೆದುಕೊಂಡಿದೆ.
ನೆನ್ನೆಯಷ್ಟೇ ವಾಲ್ಮೀಕಿ ಹಗರಣದಲ್ಲಿ ಇಡಿ ಅಧಿಕಾರಿಗಳು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೆಸರೇಳುವಂತೆ ಒತ್ತಡ ಹಾಕಿದ್ದರು ಎಂದು ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ಬಿ.ನಾಗೇಂದ್ರ ಆರೋಪ ಮಾಡಿದ್ದರು. ಇದೀಗ ಲೋಕಾಯುಕ್ತ ತನಿಖೆ ನಡೆಯುತ್ತಿರುವಾಗಲೇ ಇಡಿ ದಾಳಿ ಮಾಡಿರುವುದು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಆರೋಪಿಸಿದೆ.

