ಬೆಂಗಳೂರು:
ಶಿಕ್ಷಕರ ಸಶಕ್ತೀಕರಣದಿಂದ ಅವರನ್ನು ಭವಿಷ್ಯದ ಚಿಂತಕರು, ನಾಯಕರು ಹಾಗೂ ಅನ್ವೇಷಣಾಕಾರರನ್ನಾಗಿ ಮಾಡುವ “ಟೀಚರ್ಸ್360 ಲರ್ನಿಂಗ್ ಸ್ಪೇಸಸ್” ಅನ್ನು ಶುಕ್ರವಾರ ಅಧಿಕೃತವಾಗಿ ಅನಾವರಣಗೊಳಿಸಲಾಯಿತು.
ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಐಎಸ್ ಸಿಇಯ ಸಿಇಒ ಡಾ.ಜೋಸೆಫ್ ಇಮ್ಯಾನ್ಯುಲ್, ನಿವೃತ್ತ ಲೆಫ್ಟಿನೆಂಟ್ ಜೆನರಲ್ ಅನಂತನಾರಾಯಣ್ ಅರುಣ್, ಶಿಕ್ಷಣ ಕ್ಷೇತ್ರದ ಹಿರಿಯರಾದ ಹಾಗೂ ಸಿಬಿಎಸ್ಇ ಮಾಜಿ ನಿರ್ದೇಶಕರಾದ ಜಿ.ಬಾಲಸುಬ್ರಮಣಿಯನ್, ಗ್ರೇಕ್ಯಾಪ್ಸ್ ನಾಲೆಡ್ಜ್ ಟ್ರೈಬ್ ನ ಸಿಇಒ ಗಿರಿ ಪಿಕ್ ಬ್ರೈನ್ ಹಾಗೂ ಶಿಕ್ಷಣತಜ್ಞರಾದ ಐಶ್ವರ್ಯ ಡಿಕೆಎಸ್ ಹೆಗಡೆ ಅವರು ಅನಾವರಣಗೊಳಿಸಿದರು.
ಶಿಕ್ಷಕರನ್ನು ಜ್ಞಾನ, ಕೌಶಲ್ಯ ಹಾಗೂ ದೂರದೃಷ್ಟಿಯ ಮೂಲಕ ಶಿಕ್ಷಕರನ್ನು ಸಶಕ್ತೀಕರಣಗೊಳಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಶಿಕ್ಷಣತಜ್ಞರಾದ ಐಶ್ವರ್ಯ ಡಿಕೆಎಸ್ ಹೆಗಡೆ ಅವರು ಈ ಕಾರ್ಯಕ್ರಮದ ರೂವಾರಿಯಾಗಿದ್ದು, ಜಿ.ಬಾಲಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಹಾಗೂ ಗ್ರೇಕ್ಯಾಪ್ಸ್ ನಾಲೆಡ್ಜ್ ಟ್ರೀಬ್ ಅವರ ಸಹಯೋಗದಲ್ಲಿ ಈ ಟೀಚರ್360 ಕಾರ್ಯಕ್ರಮ ರೂಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಐಶ್ವರ್ಯ ಅವರು, “ಇದು ಕೇವಲ ತರಬೇತಿ ಕಾರ್ಯಕ್ರಮ ಮಾತ್ರವಲ್ಲ. ಇದೊಂದು ಅಭಿಯಾನ. ಇದರ ಮೂಲಕ ನಾವು ಒಟ್ಟಾಗಿ ಶಿಕ್ಷಣ ಕ್ಷೇತ್ರಕ್ಕೆ ಹೊಸ ಸ್ವರೂಪ ನೀಡಬಹುದು” ಎಂದು ತಿಳಿಸಿದರು.
ಜಿ.ಬಾಲಸುಬ್ರಮಣಿಯನ್ ಅವರು ಮಾತನಾಡಿ, “ಟೀಚರ್360 ಕಾರ್ಯಕ್ರಮವು ಶಿಕ್ಷಕರನ್ನು ಎಲ್ಲಾ ರೀತಿಯಲ್ಲೂ ಸಶಕ್ತರನ್ನಾಗಿ ಮಾಡಿ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಮಿತವಾದ ಅವಕಾಶವನ್ನು ಸೃಷ್ಟಿ ಮಾಡಲು ಮಾರ್ಗದರ್ಶನ ನೀಡಲಾಗುವುದು” ಎಂದು ತಿಳಿಸಿದರು.
ಗಿರಿ ಪಿಕ್ ಬ್ರೈನ್ ಅವರು ಮಾತನಾಡಿ, “ಮುಂದಿನ 10 ವರ್ಷಗಳ ಕಾಲ ಯಾವ ದೇಶ ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಬಂಡವಾಳ ಹೂಡಿಕೆ ಮಾಡುತ್ತದೆಯೋ ಆ ದೇಶ ಮುಂದಿನ ಜಾಗತಿಕ ನಾಯಕ ರಾಷ್ಟ್ರವಾಗಿ ರೂಪುಗೊಳ್ಳಲಿದೆ” ಎಂದು ತಿಳಿಸಿದರು.