ಬೆಂಗಳೂರು: ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ಸ್ಫೋಟಗೊಂಡು ಬಾಣಸಿಗನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಿಟಿಎಂ ಲೇಔಟ್ 1ನೇ ಹಂತದ ಮಂಜುನಾಥ ಲೇಔಟ್ನಲ್ಲಿ ಸೋಮವಾರ ಬೆಳಗ್ಗೆ ಘಟನೆ ನಡೆದಿದೆ.
ಪವನ್ (36) ಗಾಯಾಳು. ಸ್ಫೋಟದಲ್ಲಿ ಪವನ್ಗೆ ಶೇ.60ಕ್ಕೂ ಅಧಿಕ ಸುಟ್ಟ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಪವನ್, 17 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ವೃತ್ತಿಯಲ್ಲಿ ಬಾಣಸಿಗನಾಗಿದ್ದ ಈತ, ಕಳೆದ ಹತ್ತು ವರ್ಷಗಳಿಂದ ಮಂಜುನಾಥ ಲೇಔಟ್ನ ಜಾನಕಿ ಎಂಬುವರ ಕಟ್ಟಡದಲ್ಲಿ ಬಾಡಿಗೆಗಿದ್ದ. ರೂಮ್ನಲ್ಲಿ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಇರಿಸಿಕೊಂಡಿದ್ದು, ರಾತ್ರಿ ಸಿಲಿಂಡರ್ ಖಾಲಿಯಾಗಿದ್ದ ಹಿನ್ನೆಲೆಯಲ್ಲಿ ಹೊಸ ಗ್ಯಾಸ್ ಸಿಲಿಂಡರ್ ತರಿಸಿಕೊಂಡು ರೆಗ್ಯೂಲೇಟರ್ ಅಳವಡಿಸಿದ್ದ. ಸೋಮವಾರ ಬೆಳಗ್ಗೆ ಸುಮಾರು 8.30ಕ್ಕೆ ಹಾಲು ಕಾಯಿಸಲು ಗ್ಯಾಸ್ ಸ್ಟೌ ಹಚ್ಚಿದಾಗ ಅನಾಹುತ ಸಂಭವಿಸಿದೆ.
ಸ್ಫೋಟದ ರಭಸಕ್ಕೆ ಕೋಣೆಯ ಒಂದು ಬದಿಯ ಗೋಡೆ ಮುರಿದುಬಿದ್ದಿದ್ದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರು. ವಿಷಯ ತಿಳಿದು ಮಂಜ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗ್ಯಾಸ್ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.