ಬೆಂಗಳೂರು: ದೀಪಾವಳಿ, ಬಲಿಪಾಡ್ಯಮಿ ಮತ್ತು ಕನ್ನಡ ರಾಜ್ಯೋತ್ಸವದ ಸರಣಿ ರಜೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ KSRTC ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.
ಅಕ್ಟೋಬರ್ 30 ರಿಂದ 1 ರವರೆಗೆ ಮೂರು ದಿನಗಳ ಕಾಲ ಈ ವಿಶೇಷ ಬಸ್ ಗಳು ರಾಜಧಾನಿಯಿಂದ ವಿವಿಧ ಸ್ಥಳಗಳಿಗೆ ಹೊರಡಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಹಾಸನ, ಮಂಗಳೂರು, ಕುಂದಾಪುರ, ಹೊರನಾಡು, ಶೃಂಗೇರಿ, ತಿರುಪತಿ, ಬೀದರ್, ಬೆಳಗಾವಿ, ರಾಯಚೂರು, ಮಂತ್ರಾಲಯ, ದಾವಣಗೆರೆ, ಹುಬ್ಬಳ್ಳಿ ಗೆ ವಿಶೇಷ ಬಸ್ ಗಳು ಹೊರಡಲಿವೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಪಿರಿಯಾಪಟ್ಟಣ, ಮಡಿಕೇರಿ, ಚಾಮರಾಜನಗರ, ಕುಶಾಲನಗರ ಮಾರ್ಗದ ವಿಶೇಷ ಬಸ್ ಗಳು ಕಾರ್ಯಾಚರಣೆ ಮಾಡಲಿವೆ. ತಮಿಳುನಾಡು ಮತ್ತು ಕೇರಳದ ವಿವಿಧ ಸ್ಥಳಗಳಿಗೆ ಹೊರಡುವ ಬಸ್ ಗಳು ಶಾಂತಿ ನಗರ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಆರಂಭಿಸಲಿವೆ.
ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ. ಮುಂಗಡ ಬುಕಿಂಗ್ ಮಾಡಿದರೆ, ಶೇ. 5 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ನಾಲ್ಕಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡಿದರೆ ಮಾತ್ರ ಸೌಲಭ್ಯ ದೊರೆಯಲಿದೆ. ಹೋಗುವ ಮತ್ತು ಬರುವ ಟಿಕೆಟ್ ಬುಕಿಂಗ್ ಮಾಡಿದರೆ, ಶೇ. 10 ರಷ್ಟು ರಿಯಾಯಿತಿ ಸಿಗಲಿದೆ.
ನವೆಂಬರ್ 2 ಮತ್ತು 3 ಕ್ಕೆ ವಿಶೇಷ ಬಸ್ ಗಳು ವಾಪಸ್ ಬೆಂಗಳೂರಿಗೆ ಹೊರಡಲಿವೆ. ಇದಲ್ಲದೆ ಆಯಾ ತಾಲೂಕು ಮತ್ತು ಜಿಲ್ಲಾ ಬಸ್ ನಿಲ್ದಾಣದಿಂದ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಬಸ್ ಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ಮುಂಗಡ ಬುಕ್ಕಿಂಗ್ ಮಾಡಲು ಪ್ರಯಾಣಿಕರು ಸಂಸ್ಥೆಯ ವೆಬ್ ಸೈಟ್ www.ksrtc.karnataka.gov.in ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.