ಅಪರಾಧ ಸುದ್ದಿ

ದಲಿತರ ಮನೆಗಳಿಗೆ ಬೆಂಕಿ ಹಾಕಿದ್ದ 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Share It


ಕೊಪ್ಪಳ: ಜಿಲ್ಲೆಯ ಮರಕುಂಬಿಯಲ್ಲಿ ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣದ 98 ಆರೋಪಿಗಳಿಗೆ ಕೊಪ್ಪಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಅಲ್ಲದೇ, ಇಂತಹ ಪ್ರಕರಣಗಳಲ್ಲಿ ಅನುಕಂಪ ತೋರಿಸುವುದು ನ್ಯಾಯದ ಅಪಹಾಸ್ಯವಾಗಲಿದೆ ಮತ್ತು ಆರೋಪಿತರಿಗೆ ಕಡಿಮೆ ಶಿಕ್ಷೆ ವಿಧಿಸಲು ಯಾವುದೇ ಸೂಕ್ತ ಅಥವಾ ಸಮರ್ಥ ಕಾರಣಗಳಿಲ್ಲ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ. ಚಂದ್ರಶೇಖರ್ ಆದೇಶದಲ್ಲಿ ವಿವರಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಮರಕುಂಬಿ ಗ್ರಾಮದವರಾದ ಮೇಲ್ವರ್ಗಕ್ಕೆ ಸೇರಿದ ಆರೋಪಿತರು ಪವರ್ ಸಿನಿಮಾ ನೋಡಲು ಗಂಗಾವತಿ ಶಿವ ಟಾಕೀಸ್ ಗೆ ಹೋಗಿದ್ದರು. ಈ ವೇಳೆ ಟಿಕೆಟ್ ಖರೀದಿ ವಿಚಾರವಾಗಿ ಪರಸ್ಪರ ಬಡಿದಾಡಿಕೊಂಡಿದ್ದರು.

ಘಟನೆಯ ಹಿಂದೆ ಮರಕುಂಬಿ ಗ್ರಾಮದ ದಲಿತರಿದ್ದಾರೆ ಎಂಬ ಶಂಕೆಯ ಮೇರೆಗೆ ಮೇಲ್ವರ್ಗದ ಆರೋಪಿತರು 2014ರ ಆಗಸ್ಟ್ 28ರಂದು ಅವರ ಮನೆಗಳಿಗೆ ಬೆಂಕಿ ಹಚ್ಚಿ, ನಿಂದಿಸಿ, ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದರು. ಘಟನೆಯಲ್ಲಿ ಮಹಿಳೆಯರು ಸೇರಿದಂತೆ ಹಲವರು ಗಾಯಗೊಂಡಿದ್ದರು. ಈ ಮೇರೆಗೆ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಒಟ್ಟು 117 ಮಂದಿ ವಿರುದ್ಧ ಜಾತಿ ನಿಂದನೆ, ಮಹಿಳೆಯರ ಘನತೆಗೆ ಧಕ್ಕೆ, ಮಾರಕಾಸ್ತ್ರಗಳಿಂದ ಹಲ್ಲೆ ಆರೋಪದಡಿ ದೂರು ದಾಖಲಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಆರೋಪಿತರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಆರೋಪಿತರಲ್ಲಿ ಹಲವರು ಈಗಾಗಲೇ ಮೃತಪಟ್ಟಿರುವುದರಿಂದ ಉಳಿದ 98 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ಇಬ್ಬರು ಬಾಲಕರಾಗಿದ್ದು ಅವರ ವಿರುದ್ಧ ಬಾಲ ನ್ಯಾಯಮಂಡಳಿ ವಿಚಾರಣೆ ನಡೆಸುತ್ತಿದೆ ಎಂದು ಕೋರ್ಟ್ ಆದೇಶದಲ್ಲಿ ಹೇಳಿದೆ.

ಕೋರ್ಟ್ ತನ್ನ ಆದೇಶದಲ್ಲಿ, ಇಂತಹ ಪ್ರಕರಣಗಳಲ್ಲಿ ಆರೋಪಿತರಿಗೆ ಅನುಕಂಪ ತೋರಲಾಗದು. ಎಸ್ಸಿಎಸ್ಟಿ ಸಮುದಾಯಕ್ಕೆ ಸೇರಿದ ಜನರ ಮೇಲೆ ಮಾರಣಾಂತಿರ ದಾಳಿ ನಡೆದಿದೆ. ಸಂತ್ರಸ್ತರಿಗೆ ದೊಣ್ಣೆ, ಕಲ್ಲು, ಇಟ್ಟಿಗೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಸಂತ್ರಸ್ತ ಮಹಿಳೆಯರ ಘನತೆಗೆ ಹಾನಿ ಉಂಟಾಗಿದೆ.

ವೈದ್ಯರ ವರದಿಗಳು ಸಂತ್ರಸ್ತರು ಗಾಯ ಗೊಂಡಿರುವುದನ್ನು ಸ್ಪಷ್ಟಪಡಿಸುತ್ತವೆ. ಮೌಖಿಕ ಸಾಕ್ಷ್ಯ ನುಡಿಯುವಾಗ ಉಂಟಾಗಿರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸಾಕ್ಷ್ಯವನ್ನು ನಂಬಲರ್ಹವಲ್ಲ ಎಂದು ಪರಿಗಣಿಸಲಾಗದು ಎಂದು ಕೋರ್ಟ್ ತನ್ನ 172 ಪುಟಗಳ ಆದೇಶದಲ್ಲಿ ವಿವರಿಸಿದೆ.

ಕೋರ್ಟ್ ತನ್ನ ತೀರ್ಪಿನ ಆರಂಭದಲ್ಲೇ ಶೋಷಿತ ಸಮಾಜವನ್ನು ಕಡೆಗಣಿಸಿ ಯಾವುದೇ ದೊಡ್ಡ ರಾಷ್ಟ್ರವೂ ಮೇಲೇರಲು ಸಾಧ್ಯವಿಲ್ಲ ಎಂಬ ಒಕ್ಕಣೆಯನ್ನು ದಾಖಲಿಸಿದೆ.

“No matter how big a Nation is, it is no stronger than its weakest people, and as long as you keep a person down, some part of you has to be down there to hold him down, so it means you cannot soar as you might otherwise.”-Marian Anderson.
(S.C.(AC) No.12/2015)

ಮೂಲ: lawtime.in


Share It

You cannot copy content of this page