ಬೆಂಗಳೂರು: ಕಾಲೇಜು ಮಹಿಳೆಯೊಬ್ಬರ ಮಾರ್ಪ್ ಮಾಡಿದ ಅಶ್ಲೀಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಗಿರಿ ಮೂಲದ ಬಾಲಮುರುಳಿ ಹಾಗೂ ಮತ್ತೊಬ್ಬ ಅಪ್ರಾಪ್ತ ಯುವಕನೇ ಬಂಧಿತರು. ಈ ಇಬ್ಬರು ವ್ಯಕ್ತಿಗಳು ಮಧುರೈ ಗ್ರಾಮಾಂತರ ಜಿಲ್ಲಾ ಸೈಬರ್ ಕ್ರೈಮ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಇಬ್ಬರನ್ನು ವಶಕ್ಕೆ ಪಡೆದು, ಅವರಿಂದ ಮೊಬೈಲ್ ಫೋನ್, ಸಿಮ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಗಳನ್ನು ಸೀಝ್ ಮಾಡಲಾಗಿದೆ.
ಕಾಲೇಜೊಂದರಲ್ಲಿ ವ್ಯಾಸಂಗದ ಮಾಡುತ್ತಿದ್ದ ಮಹಿಳೆಯ ಫೋಟೋ ಬಳಸಿ, ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಡಿಲೀಟ್ ಮಾಡಲು 10 ಸಾವಿರ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಈ ಸಂಬಂಧ ಮಹಿಳೆಯ ತಂದೆ ನೀಡಿದ ದೂರಿನ ಅನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಮಧುರೈ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಕೆ.ಅರವಿಂದ್ ಅವರ ನೇತೃತ್ವದಲ್ಲಿ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ತಂಡ ಕಾರ್ಯಾಚರಣೆ ನಡೆಸಿ, ಫೋಟೋ ಡಿಲೀಟ್ ಮಾಡಲು ಹಣ ಕೊಡುವುದಾಗಿ ಕರೆಸಿ ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದರು. ಆರೋಪಿಗಳು ಇನ್ನಷ್ಟು ಮಹಿಳೆಯರಿಗೆ ಇದೇ ರೀತಿ ಬೆದರಿಸಿ ಹಣ ವಸೂಲಿ ಮಾಡಿರುವ ಆರೋಪಗಳಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷ್ಣಗಿರಿ ಮೂಲದ ಆರೋಪಿ ಬಾಲಮುರುಳಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮತ್ತೊಬ್ಬ ಅಪ್ರಾಪ್ತ ಆರೋಪಿಯನ್ನು ಸರಕಾರದ ಬಾಲ ವಿಚಾರಣಾ ಕೇಂದ್ರದಲ್ಲಿ ಇರಿಸಲಾಗಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸೈಬರ್ ಕ್ರೈಮ್ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಎಸ್ ಪಿ ಅರವಿಂದ್ ತಿಳಿಸಿದ್ದಾರೆ.