ಬೆಂಗಳೂರು: ಗಣ್ಯರ ಶಿಫಾರಸ್ಸು ಪತ್ರಗಳ ಆಧರಿಸಿ ನೀಡುವ ವಿಐಪಿ ಬ್ರೇಕ್ ದರ್ಶನವನ್ನು ಅಕ್ಟೋಬರ್ 31 ರಂದು ರದ್ದುಗೊಳಿಸಲು ಟಿಟಿಡಿ ತೀರ್ಮಾನಿಸಿದೆ.
ದೀಪಾವಳಿ ಹಬ್ಬದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ವಿಐಪಿ ಬ್ರೇಕ್ ದರ್ಶನವನ್ನು ರದ್ದುಗೊಳಿಸುವ ತೀರ್ಮಾನವನ್ನು ಟಿಟಿಡಿ ಮಾಡಿದೆ. ಆದರೆ, ಶಿಷ್ಟಾಚಾರದ ವ್ಯಾಪ್ತಿಯಲ್ಲಿ ಬರುವ ಯಾವುದೇ ವಿಐಪಿ ದರ್ಶನಕ್ಕೆ ತಡೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಅ. 30 ರಂದು ವಿವಿಧ ರಾಜ್ಯಗಳ ಗಣ್ಯರು ಮತ್ತು ಟಿಟಿಡಿ ಸದಸ್ಯರ ಶಿಫಾರಸು ಪತ್ರಗಳನ್ನು ಪಡೆದು ದರ್ಶನಕ್ಕೆ ಆಗಮಿಸದಂತೆ ಟಿಟಿಡಿ ಮನವಿ ಮಾಡಿಕೊಂಡಿದೆ. ಹೀಗಾಗಿ, ವಿಐಪಿ ಬ್ರೇಕ್ ದರ್ಶನಕ್ಕೆ ತೆರಳಬೇಕಿದ್ದವರು ಮುಂಜಾಗ್ರತೆ ವಹಿಸಬೇಕಿದೆ.
ದೀಪಾವಳಿ, ಬಲಿಪಾಡ್ಯಮಿ ಹಾಗೂ ವೀಕೆಂಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರಲಿದ್ದು, ಸುಗಮ ದರ್ಶನಕ್ಕಾಗಿ ಕೆಲ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಟಿಟಿಡಿ ತಿಳಿಸಿದೆ.
ಟಿಟಿಡಿ ಮಾಹಿತಿಯ ಪ್ರಕಾರ ಶನಿವಾರ 56,501 ಭಕ್ತರು ತಿರುಮಲ ದೇವಸ್ಥಾನದಲ್ಲಿ ದರ್ಶನ ಪಡೆದಿದ್ದಾರೆ. ಅಂದು ಒಂದೇ ದಿನದಲ್ಲಿ ತಿರುಮಲ ದೇವಸ್ಥಾನದ ಹುಂಡಿಯಲ್ಲಿ 3.78 ಕೋಟಿ ರು.ಗಳ ಕಾಣಿಕೆ ಸಂಗ್ರಹವಾಗಿದೆ ಎನ್ನಲಾಗಿದೆ. ಜತೆಗೆ ಭಾನುವಾರ ಟೋಕನ್ ಇಲ್ಲದ ಭಕ್ತರಿಗೆ ಕೇವಲ 6 ಗಂಟೆ ದರ್ಶನದ ಅವಧಿಯನ್ನು ನಿಗದಿ ಮಾಡಲಾಗಿತ್ತು.